ಬೆಳಗಾವಿ: ಬೆಳಗಾವಿ ಹೊರವಲಯ ಗಣೇಶಪುರದಲ್ಲಿರುವ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಕ್ತಿ ತುಂಬುತ್ತಾ? ಎಂಬ ಪ್ರಶ್ನೆ ಉದ್ಭವಾಗಿದೆ. ರಾಜ್ಯದ ಕಬ್ಬು ಬೆಳೆಗಾರರ ಸಮೃದ್ಧಿ, ಸಕ್ಕರೆ ಉದ್ಯಮ ತಾಂತ್ರಿಕತೆ ಅಭಿವೃದ್ಧಿಗೆ ಸರ್ಕಾರವೇ ಈ ಸಂಸ್ಥೆಯನ್ನು ಸ್ಥಾಪಿಸಿದೆ. ಈ ಸಂಸ್ಥೆ ರಾಜ್ಯದಲ್ಲಿನ ಒಟ್ಟು 75 ಸಕ್ಕರೆ ಕಾರ್ಖಾನೆಗಳ ಕಾರ್ಯನಿರ್ವಹಣೆ ಮಾಡುತ್ತಿದೆ. ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲೇ ಅತಿಹೆಚ್ಚು 27 ಸಕ್ಕರೆ ಕಾರ್ಖಾನೆಗಳ ನಿರ್ವಹಣೆ ಮಾಡುತ್ತಿದೆ. ಆದರೆ ಇದೀಗ ಈ ಸಂಸ್ಥೆಗೆ ಸಂಕಟ ಎದುರಾಗಿದೆ. ಹೌದು ಒಂದೆಡೆ ಸರಿಯಾದ ಸಮಯಕ್ಕೆ ರೈತರ ಬಿಲ್ ಪಾವತಿ ಮಾಡದೇ ಕಾರ್ಖಾನೆಗಳು ಚೆಲ್ಲಾಟವಾಡುತ್ತಿದ್ದರೇ, ಮತ್ತೊಂದೆಡೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ವಂತಿಗೆ ನೀಡಲೂ ಸಹ ಹಿಂದೇಟು ಹಾಕುತ್ತಿವೆ.
ಸಕ್ಕರೆ ಕಾರ್ಖಾನೆಗಳು ಸಾಕಷ್ಟು ಲಾಭಗಳಿಸಿದರೂ ಸರ್ಕಾರಕ್ಕೆ, ಸಂಸ್ಥೆಗೆ ಸಹಾಯ ಮಾಡುತ್ತಿಲ್ಲ. ಒಂದು ಟನ್ ಕಬ್ಬು ನುರಿಸಿದರೇ ಸಕ್ಕರೆ ಸಂಸ್ಥೆಗೆ ಕಾರ್ಖಾನೆಗಳು 1 ರೂ. ವಂತಿಗೆ ನೀಡಬೇಕು. ಆದರೆ ಕಾರ್ಖಾನೆಗಳು ವಂತಿಗೆ ಕೊಡದೆ ಹಿಂದೇಟು ಹಾಕುತ್ತಿವೆ. ಸಂಸ್ಥೆಗೆ ವಿವಿಧ ಸಕ್ಕರೆ ಕಾರ್ಖಾನೆಗಳಿಂದ 25 ಕೋಟಿ ರೂ. ವಂತಿಗೆ ಬರಬೇಕಿದೆ. ಇದರಿಂದ ಎಸ್.ನಿಜಲಿಂಗಪ್ಪ ಇಕ್ಕಟ್ಟಿಗೆ ಸಿಲುಕಿದೆ. ಇದರಿಂದಾಗಿ ಕಬ್ಬು ಅಭಿವೃದ್ಧಿ, ಹೊಸ ತಳಿಯ ಸಂಶೋಧನೆಗೆ ಹಿನ್ನಡೆಯಾಗುತ್ತಿದೆ.
ಈ ಹಿಂದೆ ಫೆಬ್ರವರಿ 24 ರಂದು ರಾಜ್ಯ ಸರ್ಕಾರ ಸಕ್ಕರೆ ಸಂಸ್ಥೆಗೆ ವಂತಿಗೆ, ಪರವಾನಿಗೆ ಶುಲ್ಕ ನೀಡುವ ಸಂಬಂಧ ಅಧಿಸೂಚನೆ ಹೊರಡಿಸಿತ್ತು. ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆ ವಿರುದ್ಧ ಹಲವು ಪ್ರಭಾವಿ ರಾಜಕಾರಣಿಗಳ ಮಾಲೀಕತ್ವದಲ್ಲಿ ಇರುವ ಕೆಲ ಖಾಸಗಿ ಸಕ್ಕರೆ ಕಾರ್ಖಾನೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಇದೀಗ ಸರ್ಕಾರ ಕಾನೂನು ಹೋರಾಟ ಮಾಡಿ ಸಕ್ಕರೆ ಕಾರ್ಖಾನೆಗಳಿಗೆ ಬಿಸಿ ಮುಟ್ಟಿಸುತ್ತಾ ಕಾದುನೋಡಬೇಕಿದೆ. ಸಕ್ಕರೆ ಕಾರ್ಖಾನೆಗಳು ವಂತಿಗೆ ನೀಡಿದರೇ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಸಂಸ್ಥೆ ಅಭಿವೃದ್ಧಿ ಆದರೇ ರೈತರ ಜೊತೆ ಸಕ್ಕರೆ ಕಾರ್ಖಾನೆಗಳಿಗೂ ಲಾಭವಾಗುತ್ತದೆ.
ಈ ಸಂಸ್ಥೆ ರೈತರಿಗೆ ಕಬ್ಬಿನ ಇಳುವರಿ, ಲಾಭ ಹೆಚ್ಚಿಸಲು ತರಬೇತಿ ನೀಡುತ್ತದೆ. ಸಕ್ಕರೆ ಕಾರ್ಖಾನೆಗಳ ಸಾಮರ್ಥ್ಯ, ಲಾಭಾಂಶ ಹೆಚ್ಚಿಸಲು ಕಾರ್ಮಿಕರಿಗೂ ಸಹ ತರಬೇತಿ ನೀಡುತ್ತದೆ. ಹೀಗಾಗಿ ಸಂಸ್ಥೆಯ ಅಭಿವೃದ್ಧಿ, ತಜ್ಞ ಸಿಬ್ಬಂದಿ ನೇಮಕಕ್ಕೆ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ. ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ ಈ ಸಂಬಂಧ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ತಜ್ಞ ಸಿಬ್ಬಂದಿ ನೇಮಕ ಮಾಡುವ ಅಗತ್ಯತೆ ಇದೆ.
ಸಕ್ಕರೆ ಕಾರ್ಖಾನೆಗಳ ವಿರುದ್ಧ ಹರಿಹಾಯ್ದಿದ್ದ ಸಕ್ಕರೆ ಸಚಿವ
ಇತ್ತೀಚೆಗೆ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ದಿಢೀರ್ ಭೇಟಿ ನೀಡಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಸಕ್ಕರೆ ಕಾರ್ಖಾನೆಗಳಲ್ಲಿ ತೂಕದಲ್ಲಿ ರೈತರಿಗೆ ಮೋಸ ಆರೋಪ ವಿಚಾರವಾಗಿ ಮಾತನಾಡಿದ್ದ ಅವರು ಸಕ್ಕರೆ ಕಾರ್ಖಾನೆಗಳಲ್ಲಿ ಇಲಾಖೆಯಿಂದ ತೂಕದ ಯಂತ್ರ ಹಾಕುವ ಚಿಂತನೆ ಇದೆ. ಶೀಘ್ರವೇ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಕರೆಯಲಾಗುತ್ತೆ. ರಾತ್ರೋರಾತ್ರಿ ನಿರ್ಧಾರ ತಗೆದುಕೊಳ್ಳಲು ಆಗಲ್ಲ. ಪರಿಸ್ಥಿತಿ ಅನಿವಾರ್ಯವಾದರೇ ಸಕ್ಕರೆ ಕಾರ್ಖಾನೆಗಳಲ್ಲಿ ತೂಕದ ಯಂತ್ರ ಹಾಕಲೇಬೇಕಾಗುತ್ತೆ ಎಂದಿದ್ದರು.
ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಸಕ್ಕರೆ ಕಾರ್ಖಾನೆಗಳು ವಂತಿಗೆ ಹಣ ನೀಡದಿದ್ದಕ್ಕೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದ್ದರು. ಸಕ್ಕರೆ ಕಾರ್ಖಾನೆಯವರು ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ಆದರೆ ಕಾರ್ಖಾನೆಗಳು ಸರ್ಕಾರಕ್ಕೆ ಸಂಸ್ಥೆಗೆ ಏನೂ ಸಹಾಯ ಕೊಟ್ಟಿಲ್ಲ ಎಂಬುದು ನನ್ನ ಗಮನಕ್ಕಿದೆ. ಒಂದು ಟನ್‌ಗೆ ಒಂದು ರೂಪಾಯಿ ಕೊಡುವುದನ್ನು ಕೆಲವು ಮಹಾಶಯರು ಮಾಡುತ್ತಿಲ್ಲ. ಅವರಿಗೆ ಕೋರ್ಟ್‌ನಿಂದ ಇಂದು ಸಣ್ಣ ಸ್ಟೇ ತರಲು ಅಧಿಕಾರಿಗಳು ಬಿಟ್ಟಿದ್ದಾರೆ, ಅವರು ತಂದಿದ್ದಾರೆ. ನಾನು ಸಹ ಸಕ್ಕರೆ ಕಾರ್ಖಾನೆ ಮಾಲೀಕರನ್ನ ಕರೆದು ನಮ್ರತೆಯಿಂದ ವಿನಂತಿಸುವೆ. ಇದೇ ರೀತಿ ಮುಂದುವರಿದರೆ ನಮಗೂ ಕಾನೂನು ಪ್ರಕಾರ ನೋಡಿಕೊಳ್ಳಲು ಅವಕಾಶ ಇದೆ ಎಂದು ಎಚ್ಚರಿಕೆ ನೀಡಿದ್ದರು.
ಶಾಸಕರು, ಸಚಿವರದ್ದು, ಸಾರ್ವಜನಿಕರದ್ದು ಸರ್ಕಾರದ ಸಕ್ಕರೆ ಕಾರ್ಖಾನೆಗಳು ಇವೆ. ಸರ್ಕಾರಿ ಸ್ವಾಮ್ಯದ ಹತ್ತು ಕಾರ್ಖಾನೆ ನಾವೇ ಲೀಸ್ ಮೇಲೆ ಕೊಟ್ಟಿದ್ದೀವಿ. ಲೀಸ್ ಪಡೆದು ಲಾಭ ಮಾಡಿಕೊಂಡಿದ್ದಾರೆ ಹೊರತು ಸರ್ಕಾರಕ್ಕೆ ಲಾಭ ಮಾಡಿಕೊಟ್ಟಿಲ್ಲ. ಆ ಸಂಗತಿಯೂ ನನ್ನ ಗಮನಕ್ಕೆ ಇದೆ ಎಂದು ಹೇಳಿದ್ದರು.
ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಸಂಸ್ಥೆಗೆ ಪ್ರತಿ ಟನ್‌ಗೆ 30 ರೂ. ಕೊಡುತ್ತಾರೆ. ನಾವು ಒಂದು ರೂಪಾಯಿ ಕೇಳುತ್ತಿದ್ದೇವೆ, ಎರಡು ರೂ. ಇದ್ದಿದ್ದನ್ನು ಒಂದು ರೂ. ಮಾಡಿದ್ದೇವೆ. ಒಂದು ಟನ್ ಕಬ್ಬಿನಿಂದ ಕಾರ್ಖಾನೆಯವರು 600 ರಿಂದ 800 ರೂ. ಉಳಿಸಿಕೊಳ್ಳುತ್ತಾರೆ. ಆ ಗೊಂದಲಕ್ಕೆ ನಾವು ಹೋಗೋದು ಬೇಡ, ಅವರು ಲಾಭ ಮಾಡಿಕೊಂಡು ಬದುಕಲಿ. ಕಾರ್ಖಾನೆ ಬದುಕಿದರೇ ರೈತರು ಬದುಕುತ್ತಾರೆ. ರೈತ ಬದುಕಿದರೇ ಕಾರ್ಖಾನೆಯವರು ಬದುಕುತ್ತಾರೆ. ಸರ್ಕಾರಕ್ಕೆ ಲಾಭವಾಗಲಿಲ್ಲ ಅಂದರೇ ಇಲಾಖೆ ನಿರ್ವಹಣೆ ಮಾಡಬೇಕಲ್ಲ ಎಂದು ಮಾತನಾಡಿದ್ದರು.