ಬೆಂಗಳೂರು: ರಾಜಕೀಯ ಪಕ್ಷದ ಮುಖಂಡರು ಅಬ್ಬರ ಪ್ರಚಾರದೊಂದಿಗೆ ಪಾದಯಾತ್ರೆ ಹೆಸರಿನಲ್ಲಿ ಹೆಜ್ಜೆ ಹಾಕುತ್ತಿದ್ದರೆ, ಇತ್ತ ಬಿಬಿಎಂಪಿಯ ಅಧಿಕಾರಿಗಳು ಸದ್ದಿಲ್ಲದೇ ಪ್ರತಿದಿನ ಬೆಳಗ್ಗೆ ಬೆಂಗಳೂರಿನ ರಸ್ತೆಗಳಲ್ಲಿ ಹೆಜ್ಜೆ ಹಾಕುವ ಮೂಲಕ ನಾಗಕರಿಕ ಸಮಸ್ಯೆ ಅರಿತು ಸ್ಥಳದಲ್ಲಿಯೇ ಪರಿಹರಿಸುವ ಅಭಿಯಾನ ಆರಂಭಿಸಿದ್ದಾರೆ.
ಕಾಂಗ್ರೆಸ್‌ನಿಂದ ಭಾರತ್ ಜೋಡೋ ಯಾತ್ರೆ, ಬಿಜೆಪಿಯಿಂದ ಜನ ಸಂಕಲ್ಪ ಯಾತ್ರೆ ರಾಜ್ಯಾದ್ಯಂತ ಜೋರಾಗಿ ನಡೆಯುತ್ತಿದೆ. ಈ ನಡುವೆ ಬಿಬಿಎಂಪಿ ಅಧಿಕಾರಿಗಳು ರಾಜಧಾನಿಯ ರಸ್ತೆಗಳಲ್ಲಿರುವ ನಾಗಕರಿಕರ ಸಮಸ್ಯೆಗಳಾದ ರಸ್ತೆ ಗುಂಡಿ, ಕಸದ ವಿಲೇವಾರಿ ಸಮಸ್ಯೆ, ಒಣಗಿದ ಮರ ಕೊಂಬೆ ತೆರವು, ನೇತಾಡುವ ಓಎಫ್‌ಸಿ ಕೇಬಲ್ ತೆರವು, ಬೀದಿ ದೀಪ, ಪಾದಚಾರಿ ಮಾರ್ಗ ದುರಸ್ತಿ ಹಾಗೂ ಒತ್ತುವರಿ ತೆರವುಗೊಳಿಸುವುದು, ಚರಂಡಿ ದುರಸ್ತಿ ಹಾಗೂ ಹೂಳು ತೆಗೆದು ಸಮಸ್ಯೆ ಪರಿಹಾರ ಮಾಡುವ ಅಭಿಯಾನವನ್ನು ಕಳೆದ ಅ.11ರಿಂದ ಸದ್ದಿಲ್ಲದೇ ಕೈಗೊಂಡಿದ್ದಾರೆ.
ಬಿಬಿಎಂಪಿಯ ಎಂಟು ವಲಯದ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳ ನೇತೃತ್ವದಲ್ಲಿ ಈ ಕಾರ್ಯ ನಡೆಸಬೇಕು. ಅವರಿಗೆ ವಲಯ ಕಾರ್ಯಾಪಾಲಕ ಎಂಜಿನಿಯರ್, ಅರಣ್ಯ, ಫನತ್ಯಾಜ್ಯ, ತೋಟಗಾರಿಕೆ, ಯೋಜನೆ, ರಸ್ತೆ ಹೀಗೆ ಪ್ರತಿಯೊಂದು ವಿಭಾಗದ ಅಧಿಕಾರಿಗಳು ಕಡ್ಡಾಯವಾಗಿ ಸಾಥ್ ನೀಡಬೇಕಿದೆ. ಪರಿಶೀಲನೆ ಶುರು ಮಾಡಿದ ತಕ್ಷಣ ಫೋಟೋ ತೆಗೆದು ಮುಖ್ಯ ಆಯುಕ್ತರಿಗೆ ರವಾನಿಸಬೇಕಿದೆ.
10 ಕಿ.ಮೀ ಟಾಸ್ಕ್
ಪ್ರತಿ ದಿನ ಬೆಳಗ್ಗೆ 6ರಿಂದ ಹೆಜ್ಜೆ ಹಾಕುವ ಕಾರ್ಯವನ್ನು ಅಧಿಕಾರಿ ಆರಂಭಿಸಬೇಕು. ದಿನಕ್ಕೆ 10 ಕಿ.ಮೀ. ಪರಿಶೀಲನೆ ನಡೆಸಬೇಕು. ತಾವು ಸಾಗುವ ರಸ್ತೆಯಲ್ಲಿ ಕಂಡು ಬರುವ ನಾಗರಿಕ ಸಮಸ್ಯೆಗಳನ್ನು ಆಯಾ ವಿಭಾಗದ ಅಧಿಕಾರಿಗಳೊಂದಿಗೆ ಸ್ಥಳದಲ್ಲಿಯೇ ಚರ್ಚಿಸಿ ಕೂಡಲೇ ಪರಿಹಾರ ಕಂಡುಕೊಳ್ಳಬೇಕು. ಈ ಬಗ್ಗೆ ದೈನಂದಿನ ವರದಿ ಸಿದ್ಧಪಡಿಸಿ ಮುಖ್ಯ ಆಯುಕ್ತರಿಗೆ ಸಲ್ಲಿಸುವಂತೆ ನಿರ್ದೇಶಿಸಲಾಗಿದೆ. ಆದರೆ, ದಿನಕ್ಕೆ 10 ಕಿ.ಮೀ. ಉದ್ದದ ರಸ್ತೆ ಪರಿಶೀಲನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. 4ರಿಂದ 5 ಕಿ.ಮೀ. ಮಾತ್ರ ಪರಿಶೀಲನೆ ಸಾಧ್ಯವಾಗುತ್ತಿದೆ. ಅಷ್ಟೊಂದು ಸಮಸ್ಯೆಗಳು ರಸ್ತೆಗಳಲ್ಲಿ ಕಾಣಿಸುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯ ಮುಖ್ಯ ರಸ್ತೆಗಳಲ್ಲಿ ಹೆಜ್ಜೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 13,900 ಕಿ.ಮೀ. ಉದ್ದದ 85,656 ರಸ್ತೆಗಳಿವೆ. ಈ ಪೈಕಿ 1,242 ಕಿ.ಮೀ. ಆರ್ಟಿರಿಯಲ್/ಸಬ್ ಆರ್ಟಿರಿಯಲ್ ರಸ್ತೆ, 192 ಕಿ.ಮೀ. ಹೈಡೆನ್ಸಿಟಿ ಕಾರಿಡಾರ್ ರಸ್ತೆ ಇದೆ. ಮೊದಲ ಹಂತದಲ್ಲಿ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಹಾಗೂ ಹೈಡೆನ್ಸಿಟಿ ಕಾರಿಡಾರ್ ರಸ್ತೆಗಳಲ್ಲಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಮುಖ್ಯ ರಸ್ತೆಗಳ ಸಮಸ್ಯೆಗಳು ಪರಿಹಾರಗೊಂಡ ನಂತರ ವಾರ್ಡ್ ರಸ್ತೆಗಳ ಕಡೆ ಗಮನ ನೀಡುವುದಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ರಸ್ತೆಗಳಲ್ಲಿರುವ ಸಮಸ್ಯೆ ಪರಿಹಾರ ಮಾಡುವ ಉದ್ದೇಶದಿಂದ ಈ ಕಾರ್ಯಕ್ರಮ ಹಾಕಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಮುಖ್ಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಲಿದೆ. ಈ ಕಾರ್ಯ ಮುಗಿಯುವುದಕ್ಕೆ 45ರಿಂದ 60 ದಿನ ಬೇಕಾಗಲಿದೆ. ಪರಿಶೀಲನೆ ಆರಂಭಗೊಂಡ ಬಳಿಕ ಮಹತ್ವದ ಬದಲಾವಣೆಗಳು ರಸ್ತೆಗಳಲ್ಲಿ ಕಾಣಬಹುದಾಗಿದೆ ಅಂತ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.