ಹುಬ್ಬಳ್ಳಿ: ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿರಿಗೆರೆ ಬಳಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಬಾಲಕ ಸೇರಿದಂತೆ ದಂಪತಿಯನ್ನು ಕೂಡಲೇ ಅಸ್ಪತ್ರೆಗೆ ಸಾಗಿಸಿ ಅವರ ಜೀವ ಉಳಿಸುವಲ್ಲಿ ಕರ್ನಾಟಕ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ನೆರವಾಗಿದ್ದಾರೆ. ಕಾರು ಹಾಗೂ ದ್ವಿಚಕ್ರ ವಾಹನಗಳ ಮಧ್ಯೆ ಇಂದು ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆ ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಿರಿಗೆರೆ ಬಳಿ ಅಪಘಾತ ಸಂಭವಿಸಿತ್ತು.
ಈ ವೇಳೆ ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಬಸವರಾಜ ಹೊರಟ್ಟಿ ಸಹಾಯಕ್ಕೆ ಧಾವಿಸಿ ಮಾನವೀಯತೆ ಮರೆದಿದ್ದಾರೆ. ಕಚೇರಿಯ ಕಾರ್ಯ ಕಲಾಪ ಮುಗಿಸಿ ಹುಬ್ಬಳ್ಳಿಯ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲೆಂದು ಇಂದು ಬೆಳಿಗ್ಗೆ ಬೆಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಸಭಾಪತಿ ಬಸವರಾಜ ಹೊರಟ್ಟಿಯವರ ಕಾರು ಸಿರಿಗೆರೆ ಬಳಿ ಬರುವಾಗ ಮಾರ್ಗ ಮಧ್ಯೆ ಅವರ ಕಣ್ಣೆದುರಲ್ಲೇ ಅಪಘಾತ ನಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ತಮ್ಮ ವಾಹನವನ್ನು ನಿಲ್ಲಿಸಲು ಸೂಚಿಸಿದ ಅವರು, ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಲು ನೆರವಾಗಿದ್ದಾರೆ. ತಕ್ಷಣ ಸ್ಥಳೀಯ ಪೊಲೀಸರಿಗೆ ಕರೆ ಮಾಡಿ ಅಪಘಾತ ನಡೆದ ಸ್ಥಳಕ್ಕೆ ಆಗಮಿಸುವಂತೆ ಸೂಚಿಸಿದ್ದಲ್ಲದೇ ತುರ್ತಾಗಿ ಆ್ಯಂಬುಲೆನ್ಸ್ ಚಾಲಕರಿಗೆ ವಿಷಯ ತಿಳಿಸಿ ಮೂವರು ಗಾಯಳುಗಳನ್ನೂ ಸಮೀಪದ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅಪಘಾತ ನಡೆದ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಥಳದಲ್ಲಿದ್ದ ಬಸವರಾಜ ಹೊರಟ್ಟಿ ಗಾಯಾಳುಗಳಿಗೆ ಧೈರ್ಯ ಹೇಳಿ ತುರ್ತು ಚಿಕಿತ್ಸೆ ದೊರಕಿಸುವಲ್ಲಿ ಸಹಾಯ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಸಾಂವಿಧಾನಿಕ ದೊಡ್ಡ ಹುದ್ದೆಯಲ್ಲಿರುವವರು ಹೀಗೆ ಜನಸಾಮಾನ್ಯರ ಕಷ್ಟಗಳಿಗೆ ಕೂಡಲೇ ಪ್ರತಿಸ್ಪಂದಿಸಿ ನೆರವಾಗುವ ಮಾನವೀಯ ಗುಣ ಯುವ ರಾಜಕಾರಣಿಗಳು ಹಾಗೂ ಜನಸಾಮಾನ್ಯರಿಗೆ ಮಾದರಿಯಾಗಿದೆ ಎಂದು ಅನೇಕರು ಬಸವರಾಜ ಹೊರಟ್ಟಿಯವ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಪಘಾತ ನಡೆದ ತಕ್ಷಣವೇ ಚಿಕಿತ್ಸೆ ನೀಡಿದ ಕಾರಣ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿರುವುದು ಖಚಿತವಾದ ನಂತರ ಬಸವರಾಜ ಹೊರಟ್ಟಿ ತಮ್ಮ ಪ್ರಯಾಣ ಮುಂದುವರೆಸಿದ್ದಾರೆ.