ದೆಹಲಿ: ದೆಹಲಿಯಲ್ಲೂ ಕನ್ನಡ ಕಂಪು ನನಗೆ ಕಾಣಿಸುತ್ತಿದೆ. ಪುಣ್ಯಭೂಮಿ ಕನ್ನಡ ನಾಡಿನಲ್ಲಿ ಹುಟ್ಟಿ ಬೆಳೆಯುವುದೇ ಸೌಭಾಗ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ದೆಹಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ನಡೆದ ಕರ್ನಾಟಕ ಸಂಘದ ಅಮೃತ ಮಹೋತ್ಸವ ಸಮಾರಂಭದಲ್ಲಿ ಮಾತನಾಡಿ, ಜ್ಞಾನ, ತಂತ್ರಜ್ಞಾನದಿಂದ ಕೂಡಿದ ನೆಲ ಕರ್ನಾಟಕ. ನಮ್ಮ ಕನ್ನಡ ನಾಡು ನೈಸರ್ಗಿಕ ಶ್ರೀಮಂತಿಕೆಯಿಂದ ಕೂಡಿದೆ. ಈ ಸಂಘ ಸ್ಥಾಪನೆಯಲ್ಲಿ ಕೆ.ಸಿ.ರೆಡ್ಡಿ ಸಹ ಪ್ರಮುಖ ಪಾತ್ರ ವಹಿಸಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ವಿಶ್ವಕನ್ನಡ ಸಮ್ಮೇಳನಕ್ಕೆ 7 ಕೋಟಿ ಕನ್ನಡಿಗರ ಪರವಾಗಿ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸುತ್ತೇನೆ ಎಂದು ಹೇಳಿದರು.
ಕರ್ನಾಟಕ ಸಂಘ ಸ್ಥಾಪನೆಯಾಗಿ 75 ವರ್ಷ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಸಮಾರೋಪ ಸಮಾರಂಭದ ಉದ್ಘಾಟನೆ ಮಾಡಿದ್ದಾರೆ. ಏಳು ಕೋಟಿ ಜನರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಮೋದಿ ಅವರ ಐದು ಟ್ರಿಲಿಯನ್ ಆರ್ಥಿಕತೆ ಕನಸಿಗೆ ಕರ್ನಾಟಕ ಒಂದು ಟ್ರಿಲಿಯನ್ ಭಾಗ ನೀಡಲಿದೆ ಎಂದು ತಿಳಿಸಿದರು.
ನಾವೆಲ್ಲರು ಒಟ್ಟಾಗಿ ಕೊಡುಗೆ ನೀಡಬೇಕಿದೆ: ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಮೂರು ತಿಂಗಳ ಹಿಂದೆ ಕೆಂಪೇಗೌಡ ಪ್ರತಿಮೆಯನ್ನು ಮೋದಿ ಅವರು ಅನಾವರಣ ಮಾಡಿದ್ದರು. ಅದರ ನೆನಪು ಮಾಸುವ ಮುನ್ನ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಮೋದಿ ಉದ್ಘಾಟಿಸಿದ್ದಾರೆ. ಒಂದು ಟ್ರಲಿಯನ್ ಡಾಲರ್ ಕೊಡುಗೆ ನೀಡುವ ಜವಾಬ್ದಾರಿ ಕರ್ನಾಟಕದ ಮೇಲಿದೆ. ಅತ್ಯುತ್ತಮ ಬಜೆಟ್ನ್ನು ಸಿಎಂ ಬೊಮ್ಮಾಯಿ ಮಂಡಿಸಿದ್ದರು. ನಾವೆಲ್ಲರು ಒಟ್ಟಾಗಿ ಕೊಡುಗೆ ನೀಡಬೇಕಿದೆ ಎಂದು ಹೇಳಿದರು.
ಮೋದಿ ಅವರು ಅಕ್ಷರಶ ವಿಶ್ವಕ್ಕೆ ಮೋಡಿ ಮಾಡಿದ್ದಾರೆ: ತರಳಬಾಳು ಸಿರಿಗೆರೆ ಸ್ವಾಮೀಜಿ ತರಳಬಾಳು ಸಿರಿಗೆರೆ ಸ್ವಾಮೀಜಿ ಮಾತನಾಡಿ, ಈ ಹಿಂದೆ ಅಮೆರಿಕವನ್ನ ದೊಡ್ಡಣ್ಣ ಎನ್ನುತ್ತಿದ್ದರು. ಈಗ ಇಡೀ ವಿಶ್ವ ಭಾರತದ ಕಡೆ ನೋಡುವಂತೆ ಪ್ರಧಾನಿ ಮೋದಿ ಮಾಡಿದ್ದಾರೆ. ಅವರು ಅಕ್ಷರಶ ವಿಶ್ವಕ್ಕೆ ಮೋಡಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನ ನಾನು ಯಾವತ್ತು ನೇರವಾಗಿ ಭೇಟಿ ಮಾಡಿಲ್ಲ. ಈ ಬಾರಿ ನಮ್ಮ ಮಠಕ್ಕೆ ಬರುತ್ತಾರೆಂಬ ನಂಬಿಕೆ ಇದೆ ಎಂದು ಶ್ರೀಗಳು ಹೇಳಿದರು.