ಕೂಗು ನಿಮ್ಮದು ಧ್ವನಿ ನಮ್ಮದು

ಸಾಯಿಬಾಬಾರಿಂದ ಸಸ್ಯಾಹಾರಿಯಾದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಹೃದಯ ಮತ್ತು ಆತ್ಮಗಳ ಪಾವಿತ್ರ್ಯತೆಯೇ ದೈವತ್ವ. ಕಾಮ, ಕ್ರೋಧ, ಮದ, ಮೋಹ, ಮತ್ಸರಗಳ ಸಂಕೋಲೆಯಿಂದ ಆಚೆ ಬರುವುದೇ ಶುದ್ಧತೆ. ತಾಮಸ ಗುಣಗಳನ್ನು ಬಿಟ್ಟರೆ, ಶುದ್ಧತೆ ಉಂಟಾಗುತ್ತದೆ ಎಂಬುದನ್ನು ಸಾಯಿಬಾಬಾ ಬೋಧಿಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕಾಡುಗೋಡಿಯ ಸತ್ಯಸಾಯಿ ಬಾಬಾ ಆಶ್ರಮದಲ್ಲಿ ನಿರ್ಮಿಸಲಾಗಿರುವ ಶ್ರೀ ಸತ್ಯಸಾಯಿ ಡಿಜಿಟಲ್‌ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು, ಸಾಯಿಬಾಬಾ ಅವರ ಮಾರ್ಗದರ್ಶನದಲ್ಲಿ ನಡೆದರೆ, ನಾವು ದೈವತ್ವಕ್ಕೆ ಹತ್ತಿರವಾಗಬಹುದು. ಬಾಬಾ ಅವರನ್ನು ಅರಿಯಲು ನಮ್ಮ ಮನದಾಳದಲ್ಲಿ ದೈವತ್ವ ಬೇಕು. ಅವರು ದೈವತ್ವದ ಪ್ರತಿರೂಪ. ಇತರರಿಗೆ ದೈವತ್ವದ ಪರಿಮಳವನ್ನು ಬಿಟ್ಟುಹೋಗಿರುವ ದೈವೀಪುರುಷ. ಸಾಯಿಬಾಬಾ ಅವರು ಭೂಮಿಯಲ್ಲಿ ಪ್ರೀತಿ, ವಿಶ್ವಾಸ, ವಾತ್ಸಲ್ಯವನ್ನು ಬಿಟ್ಟುಹೋಗಿದ್ದಾರೆ. ಅವರ ಬೋಧನೆಗಳಲ್ಲಿ ಪರಮಾತ್ಮನಲ್ಲಿ ಲೀನನಾಗುವ ದಾರಿಯನ್ನು ತೋರಿದ್ದಾರೆ ಎಂದರು. ಸತ್ಯ ಸಾಯಿಬಾಬಾ ಅವರ ಜೀವನದ ವಿವಿಧ ಆಯಾಮಗಳನ್ನು ಬಿಂಬಿಸುವ ಡಿಜಿಟಲ್‌ ಮ್ಯೂಸಿಯಂ ಇದಾಗಿದೆ ಎಂದರು.

ಶಾಸಕ ಅರವಿಂದ ಲಂಬಾವಳಿ, ಸತ್ಯಸಾಯಿ ಆಶ್ರಮ ಟ್ರಸ್ಟ್‌ ವ್ಯವಸ್ಥಾಪಕ ನಿರ್ದೇಶಕ ರತ್ನಾಕರ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್‌.ಎನ್‌. ಪ್ರಸಾದ್‌, ಆಶ್ರಮದ ಟ್ರಸ್ಟಿಗಳು ಉಪಸ್ಥಿತರಿದ್ದರು. ಪ್ರಶಾಂತಿ ನಿಲಯಕ್ಕೆ ಭೇಟಿ ನೆನಪು

ಇಲ್ಲಿಗೆ ಭೇಟಿ ನೀಡಿ ನನ್ನಲ್ಲಿ ಪುನೀತ ಭಾವ ಮೂಡಿದೆ. ಇಲ್ಲಿಗೆ ಭೇಟಿ ನೀಡಿರುವುದು ನನ್ನ ಬದುಕಿನ ದಿವ್ಯ ಗಳಿಗೆಗಳನ್ನು ಮರುಕಳಿಸಿದೆ. 1998 ರಲ್ಲಿ ಪ್ರಶಾಂತಿ ನಿಲಯಕ್ಕೆ ಭೇಟಿ ನೀಡಿದ್ದಾಗ ಆಹಾರ ಪದ್ಧತಿಯ ಕುರಿತಾದ ಪುಸ್ತಕದ ನೂರು ಪುಟಗಳನ್ನು ಓದಿದ್ದೆ. ನಾನು ಹೇಳಬೇಕಾಗಿದ್ದು ಪುಸ್ತಕದಲ್ಲಿದೆ, ಅದೇ ನನ್ನ ಸಂದೇಶ ಎಂದು ಬಾಬಾ ಮಾತನಾಡದೆಯೇ ತಿಳಿಸಿದ್ದರು ಎಂದ ಅವರು, ಅಂದಿನಿಂದ ತಾವು ಸಸ್ಯಾಹಾರಿಯಾಗಿದ್ದೇನೆ. ನಮ್ಮ ತಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾಗ ಬಾಬಾ ಅವರನ್ನು ಪ್ರಾರ್ಥಿಸಿದಾಗ ಚೇತರಿಸಿಕೊಂಡರು ಎಂದು ಮುಖ್ಯಮಂತ್ರಿಗಳು ನೆನಪು ಮಾಡಿಕೊಂಡರು.

error: Content is protected !!