ಬೆಂಗಳೂರು: ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಜನತೆಗೆ ಅಮೃತ ಕೊಡುಗೆ ನೀಡಿದ್ದಾರೆ.
ಮಾಣಿಕಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ರಾಜ್ಯದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ ಸಿಎಂ ಹಲವು ಹೊಸ ಯೋಜನೆಗಳನ್ನು ಘೋಷಿಸಿದರು. ದೇಶಕ್ಕೆ ಇವತ್ತು ಅಮೃತ ಘಳಿಗೆ ಬಂದಿದೆ. ಈ ಅಮೃತ ಘಳಿಗೆ ಬರಲು ಹಲವು ಹೋರಾಟ, ಸತ್ಯಾಗ್ರಹ ನಡೆದಿವೆ. ಅನೇಕ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗದ ಪರಿಣಾಮ, ಇವತ್ತು ನಾವು ಸ್ವಾತಂತ್ರ್ಯದ ಅಮೃತ ಸವಿಯುತ್ತಿದ್ದೇವೆ ಎಂದರು.
ಹೊಸ ಯೋಜನೆಗಳ ಘೋಷಣೆ
ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ರೈತರು, ಶ್ರಮಿಕರು, ಸೈನಿಕರ ಕ್ಷೇಮಾಭಿವೃದ್ಧಿಗೆ ಕೆಲವು ಕೊಡುಗೆಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ 250 ಕೋಟಿ ರೂಪಾಯಿ ವೆಚ್ಚದಲ್ಲಿ ಶೇ.100ರಷ್ಟು ಶೌಚಾಲಯಗಳ ನಿರ್ಮಾಣ ಮಾಡಲಾಗುವುದು.
ಕರ್ನಾಟಕ ಕರಕುಶಲ ಅಭಿಯ ನಿಗಮದಿಂದ ಕುಂಬಾರ, ಕಮ್ಮಾರ, ಬಡಿಗ , ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯವವರು, ವಿಶ್ವಕರ್ಮರು, ಮಾದರು ಮತ್ತಿತ್ತರ ಕುಶಲ ಕರ್ಮಿಗಳಿಗೆ ತಲಾ 50 ಸಾವಿರ ರೂ.ವರೆಗೆ ಸಾಲ ಸಹಾಯಧನ ಯೋಜನೆ ಜಾರಿಗೊಳಿಸಲಾಗುವುದು.
ರೈತರ ಮಕ್ಕಳಿಗೆ ಜಾರಿಗೆ ಮಾಡಿರುವ ವಿದ್ಯಾನಿಧಿ ಯೋಜನೆಯನ್ನು ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಣೆ ಮಾಡಲಾಗುವುದು.
ರಾಜ್ಯದಲ್ಲಿ ಹೊಸದಾಗಿ 4050 ಹೊಸ ಅಂಗನವಾಡಿಗಳನ್ನು ಪ್ರಾರಂಭ ಮಾಡಲಾಗುವುದು. ಇದರಿಂದ 8100 ಮಹಿಳೆಯರಿಗೂ ಉದ್ಯೋಗ ಸಿಗಲಿದೆ.
ರಾಜ್ಯದ ಸೈನಿಕರು ಸೇವೆ ಸಲ್ಲಿಸುವಾಗ ಮೃತಪಟ್ಟರೆ ಅವರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದರು.