ಬೆಂಗಳೂರು: ಆಗಸ್ಟ್ 15ರ ನಂತ್ರ ಸರ್ಕಾರ ಮತ್ತು ಪಕ್ಷದ ಮಟ್ಟದಲ್ಲಿ ಒಂದಿಷ್ಟು ಬದಲಾವಣೆ ಆಗಬಹುದು ಎಂಬ ಸುಳಿವನ್ನು ಮುಖ್ಯಮಂತ್ರಿಗಳು ತಮ್ಮ ಸಹೋದ್ಯೋಗಿಗಳಿಗೆ ನೀಡಿದ್ದಾರೆ. ಇವತ್ತು ನಡೆದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಈ ಮುನ್ಸೂಚನೆ ನೀಡಿದ್ದಾರೆ. ಆದ್ರೆ ಯಾವ ರೀತಿಯ ಬದಲಾವಣೆ ಎಂಬ ಗುಟ್ಟನ್ನು ಸಿಎಂ ಬಿಟ್ಟುಕೊಟ್ಟಿಲ್ಲ. ಈ ಮಧ್ಯೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಅವರ ನೇತೃತ್ವದಲ್ಲಿಯೇ ಬಿಜೆಪಿ ಚುನಾವಣೆ ಎದುರಿಸಲಿದೆ ಎಂದು ಬಿಜೆಪಿ ಹೈಕಮಾಂಡ್ ಪ್ರತಿನಿಧಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ನಾಯಕತ್ವದ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಯಾವುದೇ ಚರ್ಚೆಗಳು ನಡೆದಿಲ್ಲ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಕೂಡ ಸ್ಪಷ್ಟಪಡಿಸಿದ್ದಾರೆ. ಇತ್ತ ಬಿಎಸ್‍ವೈ ಭೇಟಿಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಆದ್ರೆ ಈ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡಿದ್ದೇ ಬಿಜೆಪಿ ಎಂದು ಕಾಂಗ್ರೆಸ್ ಕಾಲೆಳೆದಿದೆ. ಈ ಮಧ್ಯೆ ಯಡಿಯೂರಪ್ಪ ನಿವಾಸಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ತಮ್ಮ ಜೊತೆ ಬಂದಿದ್ದ ಸಚಿವರಾದ ಅಶೋಕ್, ಆರಗ ಜ್ಞಾನೇಂದ್ರರನ್ನು ಹೊರಗೆ ಕಳಿಸಿ ಪ್ರತ್ಯೇಕವಾಗಿ ಇಬ್ಬರೇ ಮಾತುಕತೆ ನಡೆಸಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ