ಬೆಳಗಾವಿ: ಬಿಜೆಪಿ ಎ ಟೀಮ್ ಅಂತಾ ಎಲ್ಲರೂ ಒಪ್ಪಿಕೊಂಡಾಗಿದೆ. ಬಿ ಟೀಂ ಯಾರಾದರೆ ನಮಗೇನು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ವಿರುದ್ಧ ಪ್ರಭಾಕರ್ ಕೋರೆ ಅಸಮಾಧಾನ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ್ ಬೊಮ್ಮಾಯಿ ಅವರು, ನನಗೆ ಮುಂಚೆಯೇ ಹೇಳಿದ್ದರು. ಪೂರ್ವಭಾವಿಯಾಗಿ ಡಾಕ್ಟರೇಟ್ ಕೊಡುವ ಕಾರ್ಯಕ್ರಮ ಇತ್ತು. ಆರು ತಿಂಗಳು ಮೊದಲೇ ನಿಶ್ಚಯವಾಗಿತ್ತು. ನನಗೆ ಹೇಳಿಯೇ ಹೋಗಿದ್ದರು. ಎಲ್ಲೆಲ್ಲಿ ಸಲಹೆ ನೀಡಬೇಕೋ ಅಲ್ಲಿ ಕೊಟ್ಟಿದ್ದು, ಪ್ರಭಾಕರ್ ಕೋರೆ ನಮ್ಮ ಜೊತೆಗಿದ್ದಾರೆ. ಬೆಳಗಾವಿ ಹಾಗೂ ಹುಬ್ಬಳ್ಳಿಯಲ್ಲಿ ದೊಡ್ಡಮಟ್ಟದ ಸಭೆ ಮಾಡುತ್ತೇವೆ. ಪ್ರಭಾಕರ್ ಕೋರೆ ನಮ್ಮ ಹಿರಿಯರು ಮಾರ್ಗದರ್ಶಕರು. ಸದಾ ಕಾಲ ನಮ್ಮ ಮಾರ್ಗದರ್ಶಕರಾಗಿ ಇರುತ್ತಾರೆ. ಪಕ್ಷವು ಗುರುತಿಸುತ್ತದೆ ಮತ್ತು ನಾವು ಅವರನ್ನು ಗುರುತಿಸುತ್ತೇವೆ ಎಂದಿದ್ದಾರೆ.
ನಿಮ್ಮ ಮೇಲೆ ಸಿದ್ದರಾಮಯ್ಯ ಸಾಫ್ಟ್ ಕಾರ್ನರ್ ಹೊಂದಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ವಿರುದ್ಧವೇ ಸಿದ್ದರಾಮಯ್ಯ ಜಾಸ್ತಿ ಮಾತನಾಡುತ್ತಾರೆ, ನೀವು ನೋಡಿರಬೇಕಲ್ಲ. ಬೆಳಗಾವಿಗೆ ಬಂದಾಗ ಅವರು ಬಳಸುವ ಭಾಷೆ ನೋಡಿದಾಗ ಸಾಫ್ಟ್ ರೀತಿ ಇರುತ್ತದೆಯೋ ಅಥವಾ ಹಾರ್ಡ್ ರೀತಿ ಇರುತ್ತದೆಯೋ ಎಂಬುವುದನ್ನು ನೀವೇ ತಿಳಿದುಕೊಳ್ಳಿ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ವ್ಯಾಖ್ಯಾನದ ಬಗ್ಗೆ ನಾನು ಹೋಗಬಾರದು ಅಂತ ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಜೆಡಿಎಸ್ ಬಿ ಟೀಂ ಅಂತಾರೆ, ಜೆಡಿಎಸ್ ಕಾಂಗ್ರೆಸ್ ಪಕ್ಷ ಬಿ ಟೀಂ ಅಂತಾರೆ. ಈ ಎರಡರ ಅರ್ಥ ಏನೆಂದರೆ ಎ ಟೀಂ ಅಂತೂ ನಾವಾಗಿದ್ದೇವೆ. ಬಿಜೆಪಿ ಎ ಟೀಂ ಅಂತಾ ಎಲ್ಲರೂ ಒಪ್ಪಿಕೊಂಡಾಗಿದೆ. ಇನ್ನೂ ಬಿ ಟೀಂ ಯಾರಾದರೆ ನಮಗೇನೂ? ತಲೆಕೆಡಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳು ಸೇರಿ ಪ್ರಾದೇಶಿಕ ಪಕ್ಷ ಮುಗಿಸಲು ಹೊರಟಿದ್ದಾರೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ, ಯಾವ ಪಕ್ಷವನ್ನೂ ಇನ್ನೊಂದು ಪಕ್ಷ ಮುಗಿಸಲು ಸಾಧ್ಯವಿಲ್ಲ. ಎಲ್ಲವೂ ಅಧಿಕಾರಕ್ಕೆ ಹೋಗುವುದು ಅಧಿಕಾರ ತೆಗೆದುಕೊಳ್ಳುವುದು ಜನರ ಕೈಯಲ್ಲಿದೆ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯಸಭೆ ಚುನಾವಣೆಯಲ್ಲಿ ಮೂರು ಸ್ಥಾನ ಪಡೆದಿದ್ದೇವೆ. ಪ್ರಥಮ ಬಾರಿಗೆ ಬಿಜೆಪಿ ಮೂರು ಸ್ಥಾನ ಪಡೆದಿದೆ. ರಾಜ್ಯಸಭೆ ಚುನಾವಣೆಯಲ್ಲಿ ನಮ್ಮ ಪ್ರತಿನಿಧಿತ್ವ ಹೆಚ್ಚಾಗಿದೆ. ಅದೇ ರೀತಿ ವಿಧಾನ ಪರಿಷತ್ನ ನಾಲ್ಕು ಸ್ಥಾನ ಗೆಲ್ಲುವ ವಿಶ್ವಾಸವಿದೆ. ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ಬಂದಿದೆ. ಯಡಿಯೂರಪ್ಪ ಸೇರಿ ನಮ್ಮ ಹಿರಿಯ ನಾಯಕರು ಪ್ರಚಾರ ಮಾಡಿದ್ದಾರೆ. ಎಲ್ಲಾ ಸಂಘ ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅರುಣ್ ಶಹಾಪುರ್, ಹನುಮಂತ ನಿರಾಣಿ ದೊಡ್ಡ ಲೀಡ್ನಲ್ಲಿ ಆಯ್ಕೆಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ,