ಬೆಂಗಳೂರು: ಪಂಚರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದ ನಂತರ ರಾಜ್ಯ ರಾಜಕೀಯದಲ್ಲಿ ಹೊಸ ಅಲೆ ಶುರುವಾದಂತೆ ಭಾಸವಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ವಿಧಾನಸಭೆ ಮೊಗಸಾಲೆಯಲ್ಲಿ ಏಪ್ರಿಲ್ ರಾಜಕೀಯ ಜ್ವರ ಬಿಸಿ ಬಿಸಿ ಚರ್ಚೆಯಾಗಿದೆ. ಪಂಚರಾಜ್ಯ ಚುನಾವಣೆಯಲ್ಲಿ BJP ಗೆಲುವಿನ ನಗಾರಿ ಬಾರಿಸಿದ ಪರಿಣಾಮ ಇದೀಗ ಕರ್ನಾಟಕದಲ್ಲಿ 2023ರ ಚುನಾವಣೆಗೂ ಮೊದಲೆ ರಾಜಕೀಯವಾಗಿ ಭಾರೀ ಬದಲಾವಣೆಯ ಪರ್ವ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಅದರಲ್ಲೂ ಇದೀಗ ನಡೆಯುತ್ತಿರುವ ಬಜೆಟ್ ಅಧಿವೇಶನದ ವಿಧಾನಸಭೆ ಮೊಗಸಾಲೆಯಲ್ಲಿ BJP ಶಾಸಕರಲ್ಲಿ ಏಪ್ರಿಲ್ ರಾಜಕೀಯ ಜ್ವರದ ಮಾತುಕತೆ ಕೇಳಿ ಬಂದಿದೆ. ಪಕ್ಷ ಹಾಗೂ ಸರ್ಕಾರ ಎರಡರಲ್ಲೂ ಏಪ್ರಿಲ್‍ನಲ್ಲಿ ಬದಲಾವಣೆಗೆ ಮುಹೂರ್ತ ಫಿಕ್ಸ್ ಆಗುತ್ತೆ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಸಚಿವರಲ್ಲಿ ಚರ್ಚೆ ಸಹ ನಡೆದಿದೆ ಹಾಗಾಗಿ ಏಪ್ರಿಲ್‍ನಲ್ಲಿ ರಾಜಕೀಯ ಜ್ವರ ನಾಯಕರಲ್ಲಿ ಆವರಿಸಿಕೊಳ್ಳುವ ಸಾಧ್ಯತೆ ಇದೆ ಪಂಚರಾಜ್ಯಗಳ ಪೈಕಿ 4 ರಾಜ್ಯಗಳನ್ನು ಗೆದ್ದಿರುವ BJP ಅಧಿಕಾರ ಸ್ವೀಕಾರದ ನಂತರ ಕರ್ನಾಟಕದ ಕಡೆ ಮುಖ ಮಾಡಲು BJP ಹೈಕಮಾಂಡ್ ಪ್ಲಾನ್ ಮಾಡುತ್ತಿದೆ.
ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ, ಪದಾಧಿಕಾರಿಗಳ ಬದಲಾವಣೆ ಬಗ್ಗೆಯೂ ಬಿಜೆಪಿ ಶಾಸಕರ ನಡುವೆ ಗಂಭೀರ ಚರ್ಚೆ ನಡೆಯುತ್ತಿರುವ ಬಗ್ಗೆ ವರದಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್‍ನಲ್ಲೂ ಡಜನ್ ಗಟ್ಟಲೆ ಬದಲಾವಣೆ ಆಗುತ್ತದೆ. ಎಂಟರಿಂದ ಹತ್ತು ಹಾಲಿ ಸಚಿವರನ್ನು ಕೈ ಬಿಟ್ಟು ಹನ್ನೆರಡರಿಂದ ಹದಿನಾಲ್ಕು ಹೊಸ ಮುಖಗಳಿಗೆ ಮಣೆ ಹಾಕಬಹುದು. ಏಪ್ರಿಲ್‍ನಲ್ಲೇ ಪಕ್ಷ, ಸರ್ಕಾರ ಎರಡರಲ್ಲೂ ಬದಲಾವಣೆ ಆಗುತ್ತದೆ ಎಂದು ಶಾಸಕರ ನಡುವೆ ಪರಸ್ಪರ ಮಾತುಕತೆ ನಡೆದಿದೆ.