ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ. ಹೀಗಾಗಿ ಶಿವಮೊಗ್ಗದಲ್ಲಿ ಭಾರೀ ತಯಾರಿ ನಡೆಯುತ್ತಿದೆ. ಇಡೀ ವಿಮಾನ ನಿಲ್ದಾಣ ಹೂಗಳಿಂದ ಮದುವನಗಿತ್ತಿಯಂತೆ ಕಂಗೊಳಿಸುತ್ತಿದೆ. ಸದ್ಯ ಈ ಬಗ್ಗೆ ಮಾದ್ಯಮ ಒಂದಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದ್ದು ನಾಳೆಯ ತಯಾರಿ ಬಗ್ಗೆ ವಿವರಿಸಿದ್ದಾರೆ. ಹಾಗೂ ಇದೇ ವೇಳೆ ಬಿ.ಎಸ್.ಯಡಿಯೂರಪ್ಪಗೆ ಶಿಕಾರಿಪುರ ರಾಜಕೀಯ ಜನ್ಮ ಕೊಟ್ಟಿದೆ, ಈಗ ಅದೇ ಕ್ಷೇತ್ರದಿಂದಲೇ ನನ್ನ ರಾಜಕೀಯ ಜೀವನ ಆರಂಭ ಆಗುತ್ತಿದೆ ಎಂದರು.
ಶಿವಮೊಗ್ಗ ನೂತನ ಏರ್ಪೋರ್ಟ್ ಮೋದಿಯಿಂದ ಉದ್ಘಾಟನೆಯಾಗಲಿದೆ. ಇದು ಬಿ.ಎಸ್.ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ವಿಶೇಷ ಕೊಡುಗೆ. ಬಿಎಸ್ವೈ ಕನಸು ನನಸಾಗಿದೆ. ಮೋದಿ ಏರ್ಪೋರ್ಟ್ ಉದ್ಘಾಟನೆ ಮಾಡ್ತಿರೋದು ಸಂತಸ ತಂದಿದೆ. ಯಡಿಯೂರಪ್ಪ ಮಾರ್ಗದರ್ಶನದಲ್ಲೇ ನಾನು ಕೂಡ ಹೋಗುತ್ತೇನೆ. ಬಿಎಸ್ವೈ ಅವರೇ ನಮಗೆ ದೊಡ್ಡ ರಾಜಕೀಯ ಗುರು. ಶಿಕಾರಿಪುರ ಬಿಎಸ್ವೈ ಅವರಿಗೆ ರಾಜಕೀಯ ಜನ್ಮ ಕೊಟ್ಟಿದೆ. ಈಗ ಅದೇ ಕ್ಷೇತ್ರದಿಂದ ನನ್ನ ರಾಜಕೀಯ ಜೀವನ ಆರಂಭ ಆಗುತ್ತಿದೆ ಈ ಮೂಲಕ ಟಿಕೆಟ್ ಸಿಗುವುದು ಖಚಿತ ಎಂದಿದ್ದಾರೆ. ಪಕ್ಷ ಸಂಘಟನೆ ಜವಾಬ್ದಾರಿ ಕೊಟ್ಟಿದೆ. ಅದರಂತೆ ರಾಜ್ಯದೆಲ್ಲೆಡೆ ಪಕ್ಷ ಸಂಘಟನೆ ಮಾಡುತ್ತೇನೆ. ಚುನಾವಣೆ ಬಂದಾಗ ವಿಪಕ್ಷಗಳಿಗೆ ಅನುಕಂಪ ಬರುತ್ತದೆ. ಮೋದಿ ಅವರೇ ವಿಮಾನ ನಿಲ್ದಾಣ ಉದ್ಘಾಟನೆ ಮೂಲಕ ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಬಿವೈ ವಿಜಯೇಂದ್ರ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.
ಬಿಎಸ್ವೈ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಬರುತ್ತಿರುವುದು ವಿಶೇಷ ಇನ್ನು ಇದೇ ವೇಳೆ ಶಿವಮೊಗ್ಗದಲ್ಲಿ ಮಾಧ್ಯಮ ಒಂದಕ್ಕೆ BJP ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿದ್ದು ವಿಮಾನ ನಿಲ್ದಾಣ ಉದ್ಘಾಟನೆಗೆ ನಡೆಯುತ್ತಿರುವ ತಯಾರಿ ಬಗ್ಗೆ ಮಾಹಿತಿ ನೀಡಿದ್ದಾರೆ. ನಾಳೆ ಮೋದಿ ಅವರಿಂದ ನೂತನ ಏರ್ಪೋರ್ಟ್ ಉದ್ಘಾಟನೆಯಾಗಲಿದೆ. ಈಗಾಗಲೇ ಎಲ್ಲಾ ಸಿದ್ಧತೆ ನಡೆದಿದೆ. ಸುಮಾರು ಎರಡು ಲಕ್ಷ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಯಾವುದೇ ನಿರ್ಬಂಧ ಇಲ್ಲದೇ ಮಲೆನಾಡಿನ ಜನರಿಗೆ ಮೋದಿ ಕಾರ್ಯಕ್ರಮದಲ್ಲಿ ಭಾಗಿ ಆಗುವ ಅವಕಾಶ ಇದೆ. ಜಿಲ್ಲಾಡಳಿತ ಮತ್ತು ಪಕ್ಷದ ವತಿಯಿಂದ ಮೋದಿ ಅವರ ಕಾರ್ಯಕ್ರಮ ಹಬ್ಬದಂತೆ ಆಚರಣೆ ಮಾಡಲಾಗುತ್ತಿದೆ. ಶಿವಮೊಗ್ಗ ಸಂಪೂರ್ಣ ಅಲಂಕಾರಗೊಂಡಿದೆ. ಮೋದಿ ಅವರು ಬಿಎಸ್ವೈ ಹುಟ್ಟುಹಬ್ಬಕ್ಕೆ ಬರುತ್ತಿರುವುದು ವಿಶೇಷ. ಅವರ 80ನೇ ಹುಟ್ಟುಹಬ್ಬದ ಉಡುಗೊರೆ ಮೋದಿ ನೀಡುತ್ತಿದ್ದಾರೆ. ವಿಶ್ವನಾಯಕನೇ ಉದ್ಘಾಟನೆಗೆ ಬರುತ್ತಿರುವುದು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚು ಮಾಡಿದೆ.
ಮೋದಿ ರಾಜ್ಯ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಶಿವಮೊಗ್ಗ ರಾಣಿಬೆನ್ನೂರು ರೈಲು ಯೋಜನೆ ಕಾಮಗಾರಿ ಆರಂಭ ಆಗಿದೆ. ಹೈವೇಗಳಿಗೆ ಕೇಂದ್ರದಿಂದ ನೂರಾರು ಕೋಟಿ ಹಣ ಬಂದಿದೆ. ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚು ಅನುದಾನ ಬಂದಿದೆ ಎಂದು BJP ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.