ಚಿತ್ರದುರ್ಗ : ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು. ಚಿತ್ರದುರ್ಗ ನಗರದಲ್ಲಿ ಮಾತನಾಡಿದ ಸಚಿವರು ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆ ಆಗಿದೆ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಮತ್ತೆ ಮುಖ್ಯಮಂತ್ರಿ ಆಗಲು ಕನಸು ಕಾಣುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲೇ ಕುರ್ಚಿಗಾಗಿ ಕಚ್ಚಾಟ ನಡೆಯುತ್ತಿದೆ. ಆದರೆ ಬಿಜೆಪಿಯಲ್ಲಿ ಕುರ್ಚಿಗಾಗಿ ಕಚ್ಚಾಟ ಎಂದು ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಸಿಎಂ ಬದಲಾವಣೆ ಬಗ್ಗೆ ಮಾತಾಡಲು ಸಿದ್ದರಾಮಯ್ಯ ಭವಿಷ್ಯ ಹೇಳುತ್ತಿದ್ದಾರೆಯೇ ?. ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಸಿಎಂ ಅಭ್ಯರ್ಥಿ ಡಿಕೆಶಿ ಅಥವಾ ಸಿದ್ದರಾಮಯ್ಯ ಇವರಿಬ್ಬರಲ್ಲಿ ಯಾರು ಎಂಬುದು ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಬಗ್ಗೆ ಮೊದಲು ತಿಳಿಸಲಿ ಎಂದರು. ದೇಶದಲ್ಲಿ ಮೋದಿ ಪ್ರಧಾನಿ ಆಗಿರುವವರೆಗೆ ಕಾಂಗ್ರೆಸ್ ಧೂಳಿಪಟವಾಗಿರುತ್ತದೆ ಎಂದು ಹೇಳಿದರು. ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕಚ್ಚಾಟ ಇಲ್ಲ ಎಂದರು. ಇನ್ನು ರಮೇಶ್ ಜಾರಕಿಹೊಳಿ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪಕ್ಷ ತಿರ್ಮಾನಿಸುತ್ತದೆ. ಇವರ ಪ್ರಕರಣ ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರ ಧರ್ಮ ಬಿಟ್ಟು ಅಧರ್ಮಕ್ಕೆ ಸಹಕರಿಸುವ ಪ್ರಶ್ನೆಯೇ ಇಲ್ಲ. ಕಾನೂನು ಚೌಕಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು. ಶಾಸಕ ಅರವಿಂದ ಬೆಲ್ಲದ್ ಪೋನ್ ಟ್ಯಾಪ್ ವಿಚಾರ ತನಿಖೆ ಮೂಲಕ ಸತ್ಯ ಬಯಲಾಗುತ್ತದೆ ಎಂದು ಸಚಿವರು ಪ್ರತಿಕ್ರಿಯಿಸಿದರು.