ಚಿತ್ರದುರ್ಗ: ಮುರುಘಾಶ್ರೀಗಳು ಫೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಹೀಗಾಗಿ, ಮುರುಘಾಶ್ರೀ ಪೀಠ ತ್ಯಾಗಕ್ಕೆ ಒತ್ತಡ ಹೆಚ್ಚಿದೆ. ಇದೇ ಸಂದರ್ಭದಲ್ಲಿ ಮಠದ ಪೂಜಾ ಕೈಂಕರ್ಯಕ್ಕೆ ಮುರುಘಾಶ್ರೀ ಆಪ್ತ ಶಿಷ್ಯನನ್ನು ನೇಮಿಸಿ ಅಧಿಕೃತ ಆದೇಶ ನೀಡಿದ್ದಾರೆ. ಇದರ ಮಧ್ಯೆ ಮಾಜಿ ಸಚಿವೆ ರಾಣಿ ಸತೀಶ ಆಡಿಯೋ ಸಂಭಾಷಣೆಯೊಂದು ವೈರಲ್ ಆಗಿದೆ.
ಆಡಿಯೋದಲ್ಲಿ ಏನಿದೆ?
ಮಾಜಿ ಸಚಿವೆ ರಾಣಿ ಸತೀಶ್ ಅವರು ಮಹಡಿ ಶಿವಮೂರ್ತಿ ಜತೆ ಮಾತಾಡಿರುವ ಆಡಿಯೋ ಸಂಭಾಷಣೆ ಇದಾಗಿದ್ದು, ಮಠದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶಾಮನೂರು ಶಿವಶಂಕರಪ್ಪನವರ ಹಣವಿದೆ ಎನ್ನುವ ಅಂಶ ಆಡಿಯೋದಲ್ಲಿದೆ.
ಚಿತ್ರದುರ್ಗ ವೀರಶೈವ ಮಹಾಸಭಾದ ಜಿಲ್ಲಾದ್ಯಕ್ಷ ಮಹಡಿ ಶಿವಮೂರ್ತಿ ಅವರ ಜೊತೆ ರಾಣಿ ಸತೀಶ ಮಾತನಾಡಿದ್ದು, ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಮುರುಘಾಶ್ರೀ ಪ್ರಕರಣದಿಂದ ಸಮಾಜ ತಲೆತಗ್ಗಿಸುವ ಸ್ಥಿತಿ ಬಂದಿದೆ. ಎಂ.ಬಿ.ಪಾಟೀಲ್, ಈಶ್ವರ ಖಂಡ್ರೆ, ಶಾಮನೂರು ಶಂಕರಪ್ಪ ಅಂಥವರು ವಿರೋಧಿಸಬೇಕು. ಸೈಲೆಂಟಾಗಿದ್ದರೆ ವೀರಶೈವರಿಂದ ಮಠ ಕೈತಪ್ಪುವ ಸಾಧ್ಯತೆ ಇದೆ. ಮುರುಘಾಶ್ರೀ ಭಂಡ, ನಿರ್ಲಜ್ಜ ಮನೋಭಾವದವನು. ವೀರಶೈವ ಮಹಾಸಭಾ ಈವರೆಗೆ ಯಾಕೆ ಮೌನವಾಗಿದೆ ಗೊತ್ತಿಲ್ಲ ಎಂದು ಮಾತನಾಡಿದ್ದಾರೆ.
ಶಾಮನೂರು ದುಡ್ಡು ಮುರುಘಾಶ್ರೀ ಬಳಿಯಿದೆ ಎಂದು ಜನ ಮಾತಾಡ್ತಾರೆ. ಇನ್ನೇನು ಹುಳುಕಿದೆಯೋ ಮುಚ್ಚಿ ಹಾಕಲು ಬಸವಪ್ರಭು ಶ್ರೀಗಳನ್ನ ನೇಮಕ ಮಾಡಿದ್ದಾರೆ. ಸಿಎಂ ಆದಷ್ಟು ಬೇಗ ಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕು ಎಂದು ಆಡಿಯೋದಲ್ಲಿ ಒತ್ತಾಯಿಸಿದ್ದಾರೆ. ಸೇವಾ ಕಾರ್ಯಕ್ಕೆ ಉಸ್ತುವಾರಿ ನೇಮಕ
ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಸೆಪ್ಟಂಬರ್ 1ರಂದು ಮುರುಘಾಶ್ರೀ ಬಂಧನ ಆಗಿದ್ದು ಜೈಲು ಸೇರಿದ್ದಾರೆ. ಬಂಧನಕ್ಕೂ ಮುನ್ನ ಮುರುಘಾಶ್ರೀಗಳು ತಮ್ಮ ಅನುಪಸ್ಥಿತಿಯಲ್ಲಿ ದಾವಣಗೆರೆಯ ಹೆಬ್ಬಾಳು ಮಠದ ಮಹಾಂತ ರುದ್ರೇಶ್ವರ ಶ್ರೀಗೆ ಮಠದ ಪೂಜಾ ಕೈಂಕರ್ಯ ನೋಡಿಕೊಳ್ಳುವಂತೆ ಮೌಖಿಕವಾಗಿ ಹೇಳಿದ್ದರು. ಅಂತೆಯೇ ಹೆಬ್ಬಾಳ ಶ್ರೀ ನೇತೃತ್ವದಲ್ಲೇ ಮಠದ ಶರಣ ಸಂಸ್ಕೃತಿ ಉತ್ಸವವೂ ನಡೆದಿತ್ತು.
ಅಕ್ಟೋಬರ್ 13ರಂದು ಮುರುಘಾಶ್ರೀ ವಿರುದ್ಧ ಮತ್ತೊಂದು ಫೋಕ್ಸೋ ಪ್ರಕರಣ ದಾಖಲಾಗಿದೆ. ಅಂತೆಯೇ ಮಾಜಿ ಸಚಿವ ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮುದಾಯ ಸಭೆ ನಡೆಸಿದೆ. ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವ್ರನ್ನು ಭೇಟಿ ಮಾಡಿದೆ. ಮುರುಘಶ್ರೀ ವಜಾಗೊಳಿಸಿ ಹೊಸ ಪೀಠಾದ್ಯಕ್ಷರ ಆಯ್ಕೆಗೆ ಕಸರತ್ತು ನಡೆಸಿದೆ. ಇದೇ ವೇಳೆ ಮುರುಘಾಶ್ರೀ ತಮ್ಮ ಆಪ್ತ ಶಿಷ್ಯ ದಾವಣಗೆರೆ ಮಠದ ವಿರಕ್ತ ಮಠದ ಬಸವಪ್ರಭು ಶ್ರೀಗಳನ್ನು ಮಠದ ಪೂಜಾ ಕೈಂಕರ್ಯ, ಸೇವಾ ಕಾರ್ಯಕ್ಕೆ ಉಸ್ತುವಾರಿಯಾಗಿ ನೇಮಿಸಿದ್ದಾರೆ.