ಜನರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ನಿಲ್ಲಬಾರದು. ಈಗಿನ ಶಾಸಕರು ಆ ಕಾರ್ಯ ಮುಂದುವರಿಸಿಕೊಂಡು ಹೋಗಲಿ’ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೋಲುಂಟಾಗಿದೆ. ಕೇವಲ 66 ಸ್ಥಾನಗಳನ್ನು ಗೆಲ್ಲುವಲ್ಲಿ ಭಾರತೀಯ ಜನತಾ ಪಾರ್ಟಿ ತೃಪ್ತಿಪಟ್ಟುಕೊಂಡಿದೆ. ಭಾರಿ ಭರವಸೆ ಹೊಂದಿದ್ದ ಘಟಾನುಘಟಿ ನಾಯಕರು ಕೂಡ ಸೋಲು ಕಂಡಿದ್ದಾರೆ. ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗಿಯೂ ಕೂಡ ಬಿಜೆಪಿ ಈ ರೀತಿ ಹಿನ್ನಡೆ ಅನುಭವಿಸುತ್ತದೆ ಎಂದು ಕಾರ್ಯಕರ್ತರು ನಿರೀಕ್ಷಿಸಿರಲಿಲ್ಲ. ಒಟ್ಟಿನಲ್ಲಿ ಬಿಜೆಪಿಗೆ ಈ ಸೋಲು ದೊಡ್ಡ ಆಘಾತ ನೀಡಿದೆ. ಈಗ ಸೋಲಿನ ಬಗ್ಗೆ ಅನೇಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಟ, ರಾಜಕಾರಣಿ ಬಿ.ಸಿ. ಪಾಟೀಲ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಹಿರೇಕೆರೂರಿನಲ್ಲಿ ಮಾತನಾಡಿದ ಅವರು ‘ಕೆಲವು ತಪ್ಪು ನಿರ್ಧಾರಗಳಿಂದ ಹೊಡೆತ ಬಿದ್ದಿವೆ’ ಎಂದಿದ್ದಾರೆ.
ಕಾಂಗ್ರೆಸ್ನವರದ್ದು ಬೋಗಸ್ ಗ್ಯಾರಂಟಿ ಅಂತ ನಂತರ ಗೊತ್ತಾಗತ್ತೆ’: ‘ಬಂಜಾರ ಸಮುದಾಯದವರು ದೊಡ್ಡ ಪ್ರತಿಭಟನೆ ಮಾಡಿದ್ದರು. ಸದಾಶಿವ ಆಯೋಗವನ್ನು ಜಾರಿಗೆ ತಂದಿದ್ದು ಹರಿಜನರಿಗೆ ಅನುಕೂಲ ಆಗಿದ್ದು ಅವರಿಗೆ ಅರ್ಥ ಆಗಲಿಲ್ಲ. ರೇಷನ್ ಕಾರ್ಡ್ಗೆ ಜನರು ಮರುಳಾದರು. ಕಾಂಗ್ರೆಸ್ನವರು ಗ್ಯಾರಂಟಿ ಕಾರ್ಡ್ ಪ್ರಿಂಟ್ ಮಾಡಿ ಜನರ ಕೈಗೆ ನೀಡಿದರು. ಅದು ಬೋಗಸ್ ಎಂಬುದು ಜನರಿಗೆ ಮುಂದೆ ಗೊತ್ತಾಗುತ್ತದೆ. ಆ ಗ್ಯಾರಂಟಿಗಳನ್ನು ಈಡೇರಿಸಲು ಸಾಧ್ಯವಿಲ್ಲ. ಆಗ ನಾವು ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
ಜನರು ನನಗೆ ಈ ಹಿಂದೆ ಆಶೀರ್ವಾದ ಮಾಡಿದ್ದರು. ಒಂದು ತೃಪ್ತಿ ಇದೆ. ನಾನು ಸೋತರೂ ಕೂಡ ತಾಲೂಕಿನ ಜನರ ಋಣ ತೀರಿಸಿದ್ದೇನೆ. ಎಲ್ಲ ಕೆರೆಗಳನ್ನು ತುಂಬಿಸುವಂತಹ ಯೋಜನೆಗಳನ್ನು ಮಾಡಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ. ಸಂಪೂರ್ಣ ಮೂಲಸೌಕರ್ಯವನ್ನು ಒದಗಿಸಿ ತಾಲೂಕಿಗೆ ಹೊಸ ರೂಪ ನೀಡಿದ್ದೇನೆ. ಮನುಷ್ಯನಿಗೆ ತೃಪ್ತಿ ಇರಬೇಕು. ನಾವು ಮಾಡಿದ ಕೆಲಸದ ಬಗ್ಗೆ ಅಪಪ್ರಚಾರ ಮಾಡಿದ್ದಕ್ಕೆ ಕೆಲವರು ಮತ ಹಾಕದೇ ಇರಬಹುದು. 69 ಸಾವಿರ ಜನರು ನನ್ನ ಪರವಾಗಿ ನಿಂತಿದ್ದಾರೆ. ನಾವು ಮಾಡಿದ ಅಭಿವೃದ್ಧಿಯನ್ನು ಈಗಿನ ಶಾಸಕರು ಮುಂದುವರಿಸಿಕೊಂಡು ಹೋಗಲಿ ಎಂಬುದು ನನ್ನ ಆಶಯ’ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕ್ಷೇತ್ರದಲ್ಲಿ ಅಭಿವೃದ್ಧಿ ನಿಲ್ಲಬಾರದು. ಈಗಿನ ಶಾಸಕ ಯುಬಿ ಬಣಕಾರ್ ಅವರಿಗೆ ಜನರು ಆಶೀರ್ವಾದ ಮಾಡಿದ್ದಾರೆ. ಅವರ ಪಕ್ಷ ಆಡಳಿತಕ್ಕೆ ಬಂದಿದೆ. ಅವರು ಎಲ್ಲ ಕೆಲಸವನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಅಂತ ನಾನು ನಂಬಿದ್ದೇನೆ. ಜನರ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ’ ಎಂದಿದ್ದಾರೆ ಬಿ.ಸಿ. ಪಾಟೀಲ್.