ಹಾವೇರಿ: ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಹಿರೇಕೆರೂರಿನಲ್ಲಿ ಸುದ್ದಿಗೋಷ್ಠಿ ನಡೆಸಿರುವ ಬಿಸಿ ಪಾಟೀಲ್, ‘ಪಕ್ಷದ ಎಲ್ಲಾ ಪದವಿಗಳನ್ನು ಅನುಭವಿಸಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇದು ಖಂಡನೀಯ ಮತ್ತು ದುರಾದೃಷ್ಟ. ಒಬ್ಬ ಮುಖ್ಯಮಂತ್ರಿ ಆಗಿ ಎಲ್ಲಾ ಪದವಿಗಳನ್ನು ಅನುಭವಿಸಿದ್ರು. ತತ್ವ ಸಿದ್ಧಾತಗಳನ್ನು ಗಾಳಿಗೆ ತೂರಿ ಅವರು ಆತ್ಮವಂಚನೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದವರು ಅವರಿಗೆ ಮುಖ್ಯಮಂತ್ರಿ ಪದವಿ ಕೊಡ್ತೀವಿ ಅಂತಾ ಹೇಳಿದ್ದಾರೋ ಗೊತ್ತಿಲ್ಲ. ಅಲ್ಲಿ ಮುಖ್ಯಮಂತ್ರಿಗಿಂತ ಕೆಳಗಿನ ಪದವಿಸ್ವೀಕಾರ ಮಾಡಲು ಸಾಧ್ಯವಿಲ್ಲ. ಪ್ರಧಾನಮಂತ್ರಿ ಮಾಡ್ತೀವಿ ಅಂತಾ ಹೇಳಿದ್ದಾರೋ ಗೊತ್ತಿಲ್ಲ. ಜಗದೀಶ್ ಶೆಟ್ಟರ್ ತೆಗೆದುಕೊಂಡಿರುವ ನಿರ್ಧಾರ ತಪ್ಪು’ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣ ಸವದಿ ಪಕ್ಷದಲ್ಲಿ ಹಿರಿಯ ನಾಯಕರಾಗಿದ್ದವರು. ಅವರು ಸೋತಾಗಲೂ ಎಂಎಲ್‍ಸಿ ಮಾಡಿ ಡಿಸಿಎಂ ಮಾಡಲಾಗಿತ್ತು. ಅವರು ಡಿಸಿಎಂ ಆಗಲು ನಮ್ಮ ತ್ಯಾಗ ಕಾರಣ. ನಾವು 17 ಮಂದಿ ರಾಜೀನಾಮೆ ಕೊಟ್ಟಿದ್ದಕ್ಕೆ ಬಿಜೆಪಿ ಆಡಳಿತಕ್ಕೆ ಬಂತು. ಬಿಜೆಪಿ ಆಡಳಿತಕ್ಕೆ ಬಂದಿದ್ದರಿಂದ ಸವದಿಯನ್ನು ಡಿಸಿಎಂ ಮಾಡಲು ಸಾಧ್ಯವಾಯ್ತು. ಜಗದೀಶ್ ಶೆಟ್ಟರ್ ಸಹ ಕೈಗಾರಿಕಾ ಮಂತ್ರಿಯಾಗಿದ್ದರು. ಅವೆಲ್ಲವನ್ನೂ ಅವರು ಮರೆತಿದ್ದಾರೆ. ನಾವು 17 ಜನ ಅನರ್ಹಗೊಂಡಿದ್ವಿ, ಲಕ್ಷ್ಮಣ ಸವದಿ ತ್ಯಾಗ ಮಾಡಬೇಕಿತ್ತು. ಅವರಿಗೆ ಬಿಜೆಪಿಯಲ್ಲಿ ಉನ್ನತ ಭವಿಷ್ಯವಿತ್ತು, ಅವರ ಭವಿಷ್ಯಕ್ಕೆ ಅವರೇ ಕಲ್ಲು ಹಾಕಿಕೊಂಡಿದ್ದಾರೆ. ಇದು ಬಹಳ ನೋವಿನ ಸಂಗತಿ. ಎಲ್ಲರಿಗೂ ಬುದ್ದಿ ಹೇಳುವಂತವರು, ಕೇವಲ ಚುನಾವಣೆ ಟಿಕೆಟ್‍ಗೋಸ್ಕರ ಹೋಗಿದ್ದಾರೆ. ಇದು ಬಹಳ ಕೆಳಮಟ್ಟದ ಪರಿಸ್ಥಿತಿ ಎಂದು ಬಿಸಿ ಪಾಟೀಲ್ ಹೇಳಿದ್ದಾರೆ.
ನೆಹರು ಓಲೇಕಾರ ಎಲ್ಲವನ್ನು ಅನುಭವಿಸಿದ್ದಾರೆ. ಸಿಎಂ ಬೊಮ್ಮಾಯಿ ವಿರುದ್ಧ ಅಶ್ಲೀಲ ಪದ ಬಳಕೆ ಮಾಡಿದ್ದು ಖಂಡನೀಯ, ಹೇಯವಾದದ್ದು. ಪಕ್ಷ ವ್ಯಕ್ತಿಗಿಂತ ದೊಡ್ಡದು, ಪಕ್ಷಕ್ಕೆ ಬರುವವರು ಬರುತ್ತಾರೆ, ಹೋಗುವವರು ಹೋಗುತ್ತಾರೆ ಇದರಿಂದ ನಷ್ಟವಾಗುವುದಿಲ್ಲ. ಜಗದೀಶ್ ಶೆಟ್ಟರ್ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಹಾಕ್ತಾರೆ, ನೂರಕ್ಕೆ ನೂರು ಬಿಜೆಪಿ ಅಭ್ಯರ್ಥಿಯೇ ಗೇಲ್ತಾರೆ. ಕಾಂಗ್ರೆಸ್‍ಗೆ ಹೀನಾಯ ಪರಿಸ್ಥಿತಿ ಬಂದಿದೆ, ಯಾರು ಬರುತ್ತಾರೆ ಬರ್ರಿ ಬರ್ರಿ ಅಂತಿದ್ದಾರೆ. ಬಸ್ಟ್ಯಾಂಡ್‍ನಲ್ಲಿ ಕಾಯುತ್ತಿರುವ ಹಾಗೆ ಯಾರು ಬರುತ್ತಾರೆ ಬರ್ರಿ ಅಂತಾ ಟಿಕೆಟ್ ಹಿಡಕೊಂಡು ಕಾಯ್ತಾ ಕುಂತಿದ್ದಾರೆ. ವಿಶೇಷ ಫ್ಲೈಟ್ ಮಾಡಿಕೊಂಡು ಕರಕೊಂಡು ಹೋಗಿದ್ದಾರೆ ಎಂದು ಬಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆ ನೀರು ಹೊದರೆ ಹೊಸ ನೀರು ಬರುತ್ತದೆ. ಇವರ ಸ್ಥಾನ ತುಂಬಲು ಉತ್ತಮ ಜನರು ಬರುತ್ತಾರೆ. ಬಿಜೆಪಿ ಇರೋದರಿಂದ ಲಿಂಗಾಯತರಿಗೆ ಗೌರವ ಉಳಿದಿದೆ. ಅಲ್ಲಿಗೆ ಹೋಗಿ ಇವರು ಏನು ಮಾಡುತ್ತಾರೆ? ನಾನು ಏಕೈಕ ಕಾಂಗ್ರೆಸ್ ಶಾಸಕನಿದ್ದಾಗ ನನ್ನ ಮಂತ್ರಿ ಮಾಡಲಿಲ್ಲ. ಕಾಂಗ್ರೆಸ್‍ನಲ್ಲಿ ಲಿಂಗಾಯತ ನಾಯಕರಿಗೆ ಭವಿಷ್ಯವಿಲ್ಲ. ಗಾಳ ಹಾಕೋದು ದೊಡ್ಡ ವಿಷಯವಲ್ಲ, ಹಾಕಿಸಿಕೊಳ್ಳುವವರು ಎಂತವರು? ಯಡಿಯೂರಪ್ಪನವರಂತ ಹಿರಿಯ ನಾಯಕರು ಪಕ್ಷಕ್ಕೆ ಬೆನ್ನೇಲುಬಾಗಿದ್ದಾಗ ಯಾರು ಯಾರನ್ನು ಮುಗಿಸಲು ಸಾಧ್ಯವಿಲ್ಲ. ದುರ್ಗಾದೇವಿ ಗುಡಿಯಲ್ಲಿ ‘ಬಿ’ ಫಾಮ್೯ ಪೂಜೆ ಮಾಡಿದ ಬಳಿಕ ಮಂಗಳವಾರ 1 ಗಂಟೆಗೆ ನಾನು ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದು ಹೇಳಿದರು.