ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಶಿಕಾರಿಪುರ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರಕ್ಕೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಜೊತೆ ಸಚಿವ ಆರಗ ಜ್ಞಾನೇಂದ್ರ ಚರ್ಚಿಸಿದ್ದಾರೆ. ಕೇಸ್ ದಾಖಲಿಸಬೇಡಿ ಎಂದು ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ಆದರೆ ಕಲ್ಲುತೂರಾಟ ವೇಳೆ ಕೆಲವು ಪೊಲೀಸರಿಗೆ ಪೆಟ್ಟು ಬಿದ್ದಿದೆ. ಈ ಘಟನೆ ಕುರಿತು ತನಿಖೆ ಮಾಡುತ್ತೇವೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಶಿಕಾರಿಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಗಲಾಟೆಯಲ್ಲಿ ಕೆಲವರು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆ ಎಂದು ತಿಳಿಸಿದರು.
ಇಂತಹ ವಾತಾವರಣ ಸೃಷ್ಟಿ ಮಾಡಿದ್ದು ಬಿಜೆಪಿ ಸರ್ಕಾರ ಯಡಿಯೂರಪ್ಪ ಮನೆ ಮೇಲೆ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿ ಇಂತಹ ವಾತಾವರಣ ಸೃಷ್ಟಿ ಮಾಡಿದ್ದು ಬಿಜೆಪಿ ಸರ್ಕಾರ. ಸರ್ಕಾರದ ನಿರ್ಧಾರದಿಂದ ಬಂಜಾರ ಸಮಾಜಕ್ಕೆ ಆತಂಕ ಉಂಟಾಗಿದೆ. ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ನನ್ನ ಬೆಂಬಲವಿಲ್ಲ ಎಂದು ಹೇಳಿದರು. ಇಂದು ಕೂಡ ಮುಂದುವರೆದ ಪ್ರತಿಭಟನೆ
ಒಳಮೀಸಲಾತಿ ಜಾರಿಗೆಗೆ ಬಂಜಾರ ಸಮುದಾಯ ವಿರೋಧ ವ್ಯಕ್ತಪಡಿಸಿದ್ದು, ಸಮುದಾಯದವರು ಇಂದು (ಮಾ.28) ಕೂಡ ಶಿವಮೊಗ್ಗ ತಾಲೂಕಿನ ಕುಂಚೇನಹಳ್ಳಿ ಗ್ರಾಮದಲ್ಲಿ ರಸ್ತೆ ತಡೆದು, ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿ ಹಿಂಪಡೆಯುವೆಂತೆ ಬಂಜಾರ ಸಮಾಜ ಸರ್ಕಾರಕ್ಕೆ ಒತ್ತಾಯಿಸಿದೆ.
ಬಿಎಸ್ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟಕ್ಕೆ ಪೊಲೀಸರ ನಿರ್ಲಕ್ಷ್ಯ ಕಾರಣ
ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ (ಮಾ.27) ರಂದು ಶಿಕಾರಿಪುರ ಪೊಲೀಸರು 10 ಆರೋಪಿಗಳನ್ನು ಬಂಧಿಸಿದ್ದರು. ಉಳಿದ ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶೋಧಕಾರ್ಯ ನಡೆಸಿದ್ದಾರೆ. ಅಲ್ಲದೇ ಧರಣಿ ವೇಳೆ ಗಲಾಟೆ ಆಗುವ ಬಗ್ಗೆ ಗುಪ್ತಚರ ಇಲಾಖೆಗೆ ಮಾಹಿತಿ ಇತ್ತು. ಈ ವಿಷಯ ಶಿಕಾರಿಪುರ ಪೊಲೀಸರಿಗೆ ತಿಳಿದಿದ್ದರೂ, ಪ್ರತಿಭಟನೆಯನ್ನು ಹಗುರವಾಗಿ ಪರಿಗಣಿಸಿದ್ದು, ಮತ್ತು ನಿರ್ಲಕ್ಷ್ಯದಿಂದ ಕಲ್ಲುತೂರಾಟ ನಡೆದಿದೆ ಎಂದು ಹೇಳಲಾಗುತ್ತಿದೆ.