ಬೆಂಗಳೂರು: ಐದು ವರ್ಷ ರಾಜ್ಯವನ್ನು ಹಾಳು ಮಾಡಿ ಈಗ ಸಿದ್ದರಾಮೋತ್ಸವ ಮಾಡಿಕೊಳ್ತಿದ್ದಾರೆ ಎಂದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಿದ್ದರಾಮೋತ್ಸವದ ವಿರುದ್ಧ ಗೃಹ ಸಚಿವ ಅರಗ ಜ್ಞಾನೇಂದ್ರ ಆಕ್ರೋಶ ಹೊರಹಾಕಿದ್ದಾರೆ. ಸಿದ್ದರಾಮೋತ್ಸವ ಕುರಿತು ಮಾತನಾಡಿದ ಆರಗ ಅವರು, ಸಿದ್ದರಾಮೋತ್ಸವಕ್ಕೆ ಶುಭವಾಗಲಿ. ಆದ್ರೆ ಕಾಂಗ್ರೆಸ್ ಐದು ವರ್ಷ ಈ ರಾಜ್ಯದಲ್ಲಿ ಮಾಡಬಾರದ್ದನ್ನು ಮಾಡಿದೆ. ಈಗ ಜನರ ಮನಸ್ಸನ್ನು ಏನೋ ಮಾಡ್ತೀವಿ ಅಂತ ತೋರಿಸೋಕೆ ಪೋಸ್ ಕೊಡ್ತಿದ್ದಾರೆ. ಜನ ಯಾರು ಇದನ್ನು ನಂಬೋದಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಏನ್ ಮಾಡಿದ್ದಾರೆ ಅನ್ನೋದನ್ನ ಈಗ ಅನುಭವಿಸುತ್ತಿದ್ದೇವೆ. ‘ಲಾ ಅಂಡ್ ಅರ್ಡರ್’ ಪರಿಸ್ಥಿತಿ ಹೇಗೆ ಹಾಳಾಗ್ತಿದೆ ಅಂತ ಈಗ ಗೊತ್ತಾಗುತ್ತಿದೆ. ಅಲ್ಪಸಂಖ್ಯಾತ, ಕೆಲ ಮತಾಂಧರ ಮೇಲೆ ಇದ್ದ ಕೇಸ್‍ಗಳನ್ನ ವಾಪಸ್ ಪಡೆದಿದ್ದರು ಎಂದು ಆರೋಪಿಸಿದ್ದಾರೆ.
ಮತಾಂಧ ಶಕ್ತಿಗಳನ್ನ ಸಿದ್ದರಾಮಯ್ಯ ಸರ್ಕಾರದಲ್ಲಿ ಬೆಳೆಸಿ ಇಟ್ಟಿದ್ದಾರೆ. ಈಗ ಕಾನೂನು ಸುವ್ಯವಸ್ಥೆ ಹಾಳಾಗಿದೆ ಅಂತ ಅವರೇ ಟೀಕೆ ಮಾಡ್ತಾರೆ. ಇವತ್ತಿನ ಈ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ. ಜನ ಇದನ್ನ ಯಾವತ್ತೂ ಕೂಡಾ ಮರೆಯೋದಿಲ್ಲ ಎಂದು ಆರಗ ಅವರು ಆಕ್ರೋಶ ಹೊರಹಾಕಿದ್ದಾರೆ.