ಸ್ಯಾಂಡಲ್ ವುಡ್ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅಗಲಿಕೆ ಏಳು ತಿಂಗಳುಗಳು ಕಳೆದಿವೆ. ಈ ಹೊತ್ತಿಗೂ ಪುನೀತ್ ಅವರು ಇಲ್ಲ ಅನ್ನುವುದನ್ನು ಅಭಿಮಾನಿಗಳಿಂದ ಅರಗಿಸಿಕೊಳ್ಳಲು ಆಗುತ್ತಿಲ್ಲ. ನಮ್ಮೊಂದಿಗೆ ಅಪ್ಪು ಇದ್ದಾರೆ ಎನ್ನುತ್ತಲೇ ಅವರ ಸಮಾಧಿಗೆ ನಿತ್ಯವೂ ಸಾವಿರಾರು ಜನರು ಭೇಟಿ ನೀಡಿ, ನಮನ ಸಲ್ಲಿಸುತ್ತಾರೆ. ಒಂದಿಲ್ಲೊಂದು ಕಾರ್ಯಕ್ರಮಗಳು ಅವರ ಹೆಸರಿನಲ್ಲಿ ನಡೆಯುತ್ತಲೇ ಇವೆ. ಹಾಗೆ ಅವರನ್ನು ಜೀವಂತವಾಗಿಯೇ ಇಟ್ಟಿದ್ದಾರೆ ಅಭಿಮಾನಿಗಳು. ಮೊನ್ನೆಯಷ್ಟೇ ಹೊಸಪೇಟೆಯಲ್ಲಿ ಅವರ ಪುತ್ಥಳಿ ಅನಾವರಣ ಕಾರಣಕ್ಕೆ ಲಕ್ಷಾಂತರ ಜನರು ಸಾಕ್ಷಿಯಾಗಿದ್ದರು.
ಒಂದು ರೀತಿಯಲ್ಲಿ ಅಪ್ಪು ಜಾತ್ರೆಯೇ ಅಲ್ಲಿ ನಡೆದಿತ್ತು. ಅಷ್ಟೊಂದು ಪ್ರೀತಿಸುವ ಅಭಿಮಾನಿಗಳು ಇರುವಾಗ, ಸಹಜವಾಗಿಯೇ ಅಪ್ಪು ನೆನಪು ಮನಸ್ಸಿನಿಂದ ಮಾಸಿಹೋಗಲ್ಲ ಸಾಧ್ಯವೇ ಇಲ್ಲ. ಹಾಗಾಗಿ ಅಪ್ಪು ನಾಲ್ಕು ವರ್ಷದ ಹಿಂದೆ ಮಾಡಿದ್ದ ಟ್ವಿಟ್ ಇದೀಗ ವೈರಲ್ ಆಗಿದೆ
ಇದೇ ದಿನ ಅಂದರೆ, ನಾಲ್ಕು ವರ್ಷಗಳ ಹಿಂದೆ 07 ಜೂನ್ 2018 ರಂದು ಪುನೀತ್ ರಾಜ್ ಕುಮಾರ್ ಅವರ ಕಾರು ಆಕ್ಸಿಡೆಂಟ್ ಆಗಿತ್ತು. ಅಭಿಮಾನಿಗಳು ಆತಂಕಗೊಂಡಿದ್ದರು. ಅಪ್ಪುಗೆ ಏನಾಗಿದೆ ಎನ್ನುವ ಆತಂಕ ಎಲ್ಲರದ್ದಾಗಿತ್ತು.
ಹಾಗಾಗಿ ಅಪ್ಪು ಒಂದು ಟ್ವಿಟ್ ಮಾಡಿದ್ದರು. ‘ಆರಾಮಾಗಿದ್ದೀನಿ, ಯಾರೂ ಚಿಂತಿಸಬೇಡಿ. ನಿಮ್ಮ ಕಾಳಜಿಗೆ ಧನ್ಯವಾದಗಳು’ ಎಂದು ಟ್ವಿಟ್ ಮಾಡಿದ್ದರು. ಈಗ ಅದು ವೈರಲ್ ಆಗಿದೆ. ಏಳು ತಿಂಗಳ ಹಿಂದೆ ಅಪ್ಪು ಆಸ್ಪತ್ರೆ ಸೇರಿದಾಗ ಹೀಗೆಯೇ ಟ್ವಿಟ್ ಮಾಡಿದ್ದರೆ, ಇನ್ನೂ ಖುಷಿ ಪಡಬಹುದಿತ್ತು. ಆದರೆ, ನೀವು ಬಾರದ ಲೋಕಕ್ಕೆ ಹೋಗಿಬಿಟ್ಟಿರಿ ಎಂದು ಟ್ವಿಟ್ ಗೆ ಅಭಿಮಾನಿಗಳು ಉತ್ತರಿಸಿದ್ದಾರೆ.