ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿ ಬಿಜೆಪಿ v/s ಅಂಜಲಿ ನಿಂಬಾಳ್ಕರ್: ಡಿಸಿಸಿ ಬ್ಯಾಂಕ್ ಚುನಾವಣೆಗೂ ಅಂಟಿತು ರೆಸಾರ್ಟ್ ರಾಜಕೀಯ

ಬೆಳಗಾವಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಮತ್ತೆ ರಾಜ್ಯದ ಗಮನ ಸೆಳೆದಿದೆ. 13 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾದ ಬೆನ್ನಲ್ಲೇ ಖಾನಾಪುರ ತಾಲೂಕಾ ಸಹಕಾರಿ ನಿರ್ದೇಶಕ ಕ್ಷೇತ್ರ ಇದೀಗ ಎಲ್ಲರ ಕೇಂದ್ರ ಬಿಂದುವಾಗಿದೆ.

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕಾ ಸಹಕಾರಿ ಕ್ಷೇತ್ರಕ್ಕೆ ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಸ್ಪರ್ಧಿಸಿದ್ದು, ಅವರಿಗೆ ಪ್ರತಿ ಸ್ಪರ್ಧಿಯಾಗಿ ಎಂಇಎಸ್ ಮಾಜಿ ಶಾಸಕ ಅರವಿಂದ ಪಾಟೀಲ್ ಕಣದಲ್ಲಿದ್ದಾರೆ. ಒಟ್ಟು 48 ಪಿಕೆಪಿಎಸ್ ಬ್ಯಾಂಕ್ ಸದಸ್ಯರ ಮತದಾನ ಹೊಂದಿರುವ ಕ್ಷೇತ್ರದಲ್ಲಿ, ಶಾಸಕಿ ಅಂಜಲಿ ನಿಂಬಾಳ್ಕರ್ ಪರ 28 ಪಿಕೆಪಿಎಸ್ ಮತದಾರರು ಮಹಾರಾಷ್ಟ್ರದ ಖಾಸಗಿ ರೆಸಾರ್ಟ್ ನಲ್ಲಿ ಇದ್ದಾರೆ.

ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್

ಈ ಕುರಿತು ನ್ಯೂಸ್90 ಗೆ ಸ್ಪಷ್ಟನೆ ನೀಡಿರುವ ಶಾಸಕಿ ಅಂಜಲಿ ನಿಂಬಾಳ್ಕರ್, 48 ಮತದಾರರ ಪೈಕಿ 28 ಮತದಾರರು ಪರವಾಗಿದ್ದಾರೆ. ಮತದಾನದ ದಿನ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡಲಿದ್ದಾರೆ. ಇನ್ನೂಳಿದ 20 ಪಿಕೆಪಿಎಸ್ ಮತದಾರರು ಯಾರ ಪರ ಇದ್ದಾರೆ ಗೊತ್ತಿಲ್ಲ. ಆದ್ರೆ ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಾದಿಯಾಗಿ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ರಾಜ್ಯ ವಿರೋಧಿ ಪಕ್ಷದಲ್ಲಿ ಗುರುತಿಸಿಕೊಂಡು, ರಾಜ್ಯ ಸರ್ಕಾರದ ವಿರುದ್ದ ಮಾತನಾಡಿರುವ ಅಭ್ಯರ್ಥಿ ಬೆನ್ನಿಗೆ ನಿಂತಿದ್ದು ಎಷ್ಟು ಸರಿ, ಇಲ್ಲಿ ರಾಜ್ಯದ ಪ್ರಶ್ನೆ ಬರೋದಿಲ್ವಾ ಎಂದು ಬಿಜೆಪಿ ನಾಯಕರಿಗೆ ಚಾಟಿ ಬೀಸಿದ್ದಾರೆ.

ಎಂಇಎಸ್ ಮಾಜಿ ಶಾಸಕ ಅರವಿಂದ್ ಪಾಟೀಲ್

ಇನ್ನು ಆ 20 ಮತದಾರರನ್ನು ಮಾಜಿ ಎಂಇಎಸ್ ಶಾಸಕ ಅರವಿಂದ ಪಾಟೀಲ್ ತಮ್ಮ ಸಂಪರ್ಕದಲ್ಲಿ ಇಟ್ಟುಕೊಂಡಿದ್ದು, ಗೆಲ್ಲಲು ಬೇಕಾಗಿರುವ ಇನ್ನೂ ನಾಲ್ಕು ಸದಸ್ಯರನ್ನ ಅಂಜಲಿ ನಿಂಬಾಳಕರ್ ಕೋಟೆಯಿಂದ ಹೊರ ತರಲು ಪ್ರಯತ್ನ ನಡೆಸಿದ್ದಾರೆ. ಅಚ್ಚರಿಯೆಂದರೆ ಅರವಿಂದ ಪಾಟೀಲ್ ಗೆ ಬೆಳಗಾವಿ ಬಿಜೆಪಿ ನಾಯಕರು ಬಹಿರಂಗ ಬೆಂಬಲ ನೀಡಿದ್ದಾರೆ. ಆದರೂ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಒಟ್ಟು 48 ಪಿಕೆಪಿಎಸ್ ಮತದಾರರನ್ನ ಹೊಂದಿರುವ ಖಾನಾಪುರ ಸಹಕಾರಿ ಕ್ಷೇತ್ರದ ನಿರ್ದೇಶಕರಾಗಲು 25 ಮತದಾರರ ಬೆಂಬಲದ ಅವಶ್ಯಕತೆ ಇದೆ. ಸದ್ಯ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಬಳಿ 28 ಮತದಾರರ ಬೆಂಬಲವಿದ್ದು ಡಿಸಿಸಿ ಬ್ಯಾಂಕ್ ಚುನಾವಣಾ ಇತಿಹಾಸದಲ್ಲೇ ಮಹಿಳಾ ನಿರ್ದೇಶಕಿಯೊಬ್ಬರು ಆಯ್ಕೆಯಾಗುವ ಎಲ್ಲಾ ಸಾಧ್ಯತೆ ದಟ್ಟವಾಗಿವೆ.

ಮತ್ತೊಂದೆಡೆ ಮೂರು ಭಾರೀ ಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿದ್ದ ಡಿಸಿಎಂ ಲಕ್ಷ್ಮಣ ಸವದಿ ಅವರ ಶಿಷ್ಯ ಅರವಿಂದ ಪಾಟೀಲ್ ಶಾತಾಯ ಗತಾಯ ಗೆದ್ದು ಬೀಗಲು ಕಸರತ್ತು ನಡೆಸಿದ್ದಾರೆ. ಆದ್ರೆ ಶಾಸಕಿ ಅಂಜಲಿ ನಿಂಬಾಳಕರ್ ‌ಕೋಟೆ ಭೇದಿಸಿ ನಾಲ್ವರು ಮತದಾರರನ್ನ ಹೊರ ತರುವುದು ಅಸಾಧ್ಯ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

error: Content is protected !!