ಅಗಾರ್ತಲ: ಫೆಬ್ರುವರಿ 16ರಂದು ಚುನಾವಣೆ ನಡೆಯಲಿರುವ ತ್ರಿಪುರಾ ರಾಜ್ಯಕ್ಕೆ ಕೇಂದ್ರ ಗೃಹ ಸಚಿವ, ಬಿಜೆಪಿ ಮುಖಂಡ ಅಮಿತ್ ಶಾ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇಂದು ಸೋಮವಾರ ಭೇಟಿ ನೀಡುತ್ತಿದ್ದಾರೆ. ಈ ಇಬ್ಬರೂ ಕೂಡ ವಿವಿಧ ಚುನಾವಣಾ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಅವರು ತ್ರಿಪುರಾದ ದಕ್ಷಿಣ ಭಾಗದಲ್ಲಿರುವ ಸಂತೀರ್ಬಜಾರ್ ಮತ್ತು ಖೋವಾಯ್ ಎಂಬೆರಡು ಸ್ಥಳಗಳಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಸಲಿದ್ದಾರೆ. ಅಗಾರ್ತಲದ ಬನಮಾಲಿಪುರ್ ಕ್ಷೇತ್ರದಲ್ಲಿ ಒಂದು ರೋಡ್ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಳೆದ ತಿಂಗಳು ಕೂಡ ಅಮಿತ್ ಶಾ ತ್ರಿಪುರಾದಲ್ಲಿ ಎರಡು ರಥಯಾತ್ರೆಗಳಲ್ಲಿ ಭಾಗವಹಿಸಿದ್ದರು. ಈ ಬಾರಿ ತ್ರಿಪುರಾದಲ್ಲಿ ಚುನಾವಣಾ ಬಿಸಿ ತಾರಕಕ್ಕೇರಿದ್ದು ಅಲ್ಲಲ್ಲಿ ಹಿಂಸಾಚಾರ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮಿತ್ ಶಾ ಭೇಟಿ ವೇಳೆ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಮಮತಾ ಬ್ಯಾನರ್ಜಿ ಭೇಟಿ
ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಇಂದು ಸೋಮವಾರ ಸಂಜೆಯ ತ್ರಿಪುರಾಗೆ ಆಗಮಿಸಲಿದ್ದಾರೆ. ನಾಳೆ ಮಂಗಳವಾರ ಅವರು ಒಂದು ರೋಡ್ ಶೋ ಮತ್ತು ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ದಿದಿ ಇಂದು ಸಂಜೆ ಉದಯಪುರದ ತ್ರಿಪುರೇಶ್ವರಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ್ದಾರೆ. ಅದದ ಬಳಿಕ ಮಂಗಳವಾರ ಅಗಾರ್ತಲದಲ್ಲಿ ಒಂದು ರೋಡ್ಶೋ ಹಾಗೂ ರಬೀಂದ್ರ ಭವನ್ನಲ್ಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಎಂಸಿ ಮುಖಂಡರೊಬ್ಬರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಹಿಂಸಾಚಾರ ಘಟನೆ
ತ್ರಿಪುರಾದಲ್ಲಿ ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ಮಧ್ಯೆ ಮೊನ್ನೆ ಶನಿವಾರ ಸಂಘರ್ಷ ನಡೆದಿದ್ದು, ಈ ಘಟನೆಯಲ್ಲಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಖೋವೈ ಮತ್ತು ಉನಕೋಟಿ ಜಿಲ್ಲೆಗಳಲ್ಲಿ ಈ ಘಟನೆಗಳು ಸಂಭವಿಸಿವೆ.
ಸಚೀಂದ್ರ ಕಾಲೊನಿ ಎಂಬಲ್ಲಿ ಸಿಪಿಎಂ ಸಭೆಯೊಂದರ ಮೇಲೆ ನಡೆದ ದಾಳಿ ಘಟನೆ ಸಂಬಂಧ ಪೊಲೀಸರು ಬಿಜೆಪಿ ನಾಯಕ ಶಿವೇನ್ ದಾಸ್ ಎಂಬುವವರನ್ನು ಬಂಧಿಸಿದ್ದಾರೆ. ಚುನಾವಣಾ ಸಭೆಗಳಲ್ಲಿ ಪಾಲ್ಗೊಳ್ಳಲು ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಮಾಡಿದ ಪ್ರಯತ್ನಕ್ಕೆ ಅಡ್ಡಿಪಡಿಸಿದ ಆರೋಪ ಶಿವೇನ್ ದಾಸ್ ಮೇಲಿದೆ. ಖೋವೈನ ಸೋನಾತೊಲಾ ಎಂಬಲ್ಲಿರುವ ಸಿಪಿಎಂ ಬೂತ್ ಆಫೀಸ್ ಮೇಲೆ ಬಿಜೆಪಿ ಬೆಂಬಲಿಗರು ದಾಳಿ ಮಾಡಿ ಬೆಂಕಿ ಹಚ್ಚಿದರು. ಸಿಪಿಎಂ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಒಗ್ಗೂಡಿ ಪ್ರತಿರೋಧ ಒಡ್ಡಿದರು ಎಂದು ತ್ರಿಪುರಾದ ಸಿಪಿಎಂ ಕಾರ್ಯದರ್ಶಿ ಜಿತೇಂದ್ರ ಚೌಧುರಿ ನಿನ್ನೆ ಆರೋಪ ಮಾಡಿದ್ದಾರೆ. ಈ ಘಟನೆಯಲ್ಲಿ 6 ಮಂದಿ ಗಾಯಗೊಂಡಿರುವುದು ತಿಳಿದುಬಂದಿದೆ.
ಇದೂ ಸೇರಿ ಎರಡು ಪ್ರತ್ಯೇಕ ಹಿಂಸಾಚಾರ ಘಟನೆಗಳಲ್ಲಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಫೆ. 16ಕ್ಕೆ ಚುನಾವಣೆ
ತ್ರಿಪುರಾದಲ್ಲಿ ಸದ್ಯ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತದಲ್ಲಿದೆ. 60 ಸದಸ್ಯರ ತ್ರಿಪುರಾ ವಿಧಾನಸಭೆಗೆ ಫೆಬ್ರುವರಿ 16ರಂದು ಚುನಾವಣೆ ನಡೆಯುತ್ತಿದೆ. ಮತ ಎಣಿಕೆ ಮಾರ್ಚ್ 2ರಂದು ಆಗಲಿದೆ. ಬಿಜೆಪಿಯಿಂದ ಅಧಿಕಾರ ಕಸಿಯಲು ಸಿಪಿಎಂ, ಟಿಎಂಸಿ ಮತ್ತು ಕಾಂಗ್ರೆಸ್ ಪಕ್ಷಗಳು ಹರಸಾಹಸ ನಡೆಸುತ್ತಿವೆ.
ಇಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಮತ್ತು ಎಡಮೈತ್ರಿಕೂಟಗಳ ಮಧ್ಯೆ ಬಹುತೇಕ ನೇರ ಪೈಪೋಟಿ ಇದೆ. ಇದರ ಜೊತೆಗೆ ಹೊಸದಾಗಿ ಆರಂಭವಾಗಿರುವ ತಿಪ್ರಾ ಮೋತ ಎಂಬ ಪಕ್ಷವೂ ಮೂರನೇ ಪ್ರಮುಖ ರಾಜಕೀಯ ಶಕ್ತಿಯಾಗಿ ಉದ್ಭವವಾಗಿದ್ದು, ಚುನಾವಣೆಯಲ್ಲಿ ತ್ರಿಕೋನ ಫೈಟ್ ಏರ್ಪಡುವ ಸಾಧ್ಯತೆಯೂ ಇದೆ. ಇಲ್ಲಿ ಎಡರಂಗ ಮೈತ್ರಿಕೂಟದಲ್ಲಿ ಸಿಪಿಎಂ ಮೊದಲಾದ ಎಡಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷ ಇವೆ
ಇನ್ನು ಈ ಚುನಾವಣೆಯಲ್ಲಿ ಬಿಜೆಪಿಯು ಐಪಿಎಫ್ಟಿ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿದೆ. ತ್ರಿಪುರಾದ ರಾಜಮನೆತನಕ್ಕೆ ಸೇರಿದ ಪ್ರದ್ಯೋತ್ ಮಾಣಿಕ್ಯ ದೇಬಬರ್ಮಾ ನೇತೃತ್ವದ ತಿಪ್ರಾ ಮೋತ ಪಕ್ಷ ಸ್ವತಂತ್ರವಾಗಿ ಕಣಕ್ಕಿಳಿಯುತ್ತಿದೆ. ಅಂದಾಜುಗಳ ಪ್ರಕಾರ ಪ್ರದ್ಯೋತ್ ಅವರು ತ್ರಿಪುರಾದ ಮುಂದಿನ ಅಧಿಕಾರಕ್ಕೆ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ.