ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಈ ಉಮೇದುವಾರಿಕೆ ಸಲ್ಲಿಕೆ ಅವಧಿ ಮುಕ್ತಾಯವಾಗುತ್ತಿದ್ದಂತೆಯೇ ಬಿಜೆಪಿ ಕೇಂದ್ರ ನಾಯಕರ ಚಿತ್ತ ಕರ್ನಾಟಕದತ್ತ ನೆಟ್ಟಿದೆ. ಈಗಾಗಲೇ ಚುನಾವಣೆ ಅಖಾಡಕ್ಕೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಧುಮುಕಿದ್ದು ಇದರ ಬೆನ್ನಲ್ಲೇ ಇದೀಗ ಕೇಂದ್ರ ಗೃಹ ಅಮಿತ್ ಶಾ ಹಾಗೂ ಮೋದಿ ಜೋಡಿ ಕಮಾಲ್ ಮಾಡಲು ಸಿದ್ಧವಾಗಿದೆ.
ಅದರಂತೆ ಅಮಿತ್ ಶಾ ಕರ್ನಾಟಕ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಅಂದರೆ ಏಪ್ರಿಲ್ 21 ಮತ್ತು 22 ರಂದು ಎರಡು ದಿನಗಳ ಕಾಲ ಅಮಿತ್ ಶಾ ರಾಜ್ಯ ಪ್ರವಾಸ ನಿಗದಿಯಾಗಿದ್ದು, ರೋಡ್ ಶೋ ಹಾಗೂ ರಾಜ್ಯ ಬಿಜೆಪಿ ನಾಯಕರ ಜೊತೆ ಮಹತ್ವದ ಸಭೆ ನಡೆಸಲಿದ್ದಾರೆ.
ನಾಳೆ ಮಧ್ಯಾಹ್ನ 3.15ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ಅಮಿತ್ ಶಾ, ದೇವನಹಳ್ಳಿಯಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಂಜೆ 6 ಗಂಟೆಗೆ ರೇಸ್ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ನಲ್ಲಿ 9ರವರೆಗೆ ರಾಜ್ಯ BJP ನಾಯಕರ ಜತೆ ಅಮಿತ್ ಶಾ ಸಭೆ ಮಾಡಲಿದ್ದು, ಅದೇ ಹೋಟೆಲ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಇನ್ನು ಏಪ್ರಿಲ್ 22ರಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಹೆಚ್ಎಎಲ್ ಏರ್ ಪೋರ್ಟ್ ದೆಹಲಿಗೆ ವಾಪಸಾಗಲಿದ್ದಾರೆ. ಕರ್ನಾಟಕದಲ್ಲಿ ಮೋದಿ ಪ್ರಚಾರ
ಇನ್ನು ಪ್ರಧಾನಿ ನರೇಂದ್ರ ಮೋದಿ ಸಹ ಇದೇ ಏಪ್ರಿಲ್ 29ರಿಂದ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಲಿದ್ದು, ಒಟ್ಟು 180 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮತಬೇಟೆ ನಡೆಸಲಿದ್ದಾರೆ. ಇದಕ್ಕೆ ಹೀಗಾಗಲೇ ನರೇಂದ್ರ ಮೋದಿ ಅವರ ರೂಪ್ ಮ್ಯಾಪ್ ಸಹ ಸಿದ್ಧವಾಗಿದೆ.
ರೋಡ್ ಶೋ, ರ್ಯಾಲಿ, ಸಾರ್ವಜನಿಕ ಸಭೆಗಳನ್ನು ಮಾಡಲಿರುವ ಮೋದಿ, 10 ವಿಧಾನಸಭಾ ಕ್ಷೇತ್ರಗಳಿಗೆ ಒಂದು ಕಾರ್ಯಕ್ರಮ ಮಾಡಲಿದ್ದು, ಆ ಒಂದು ಕ್ಷೇತ್ರದಿಂದ 10 ಸಾವಿರ ಜನರನ್ನು ಸೇರಿಸುವ ಪ್ಲಾನ್ ಸಿದ್ಧವಾಗಿದೆ. ಏಪ್ರಿಲ್ 29 ರಂದು ಬೀದರ್, ದಾವಣಗೆರೆ, ಚಿತ್ರದುರ್ಗ ಮತ್ತು ಬೆಂಗಳೂರು ಪ್ರವಾಸ ಕೈಗೊಳ್ಳಲಿದ್ದಾರೆ. ಬೀದರ್, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಸಾರ್ವಜನಿಕ ಸಭೆ ಮಾಡಲಿದ್ದು, ಅಂದು ಬೆಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದಾರೆ. ಇದಕ್ಕೂ ಏಪ್ರಿಲ್ 27 ರಂದು ಮೋದಿ ಆನ್ ಲೈನ್ ಭಾಷಣ ಮಾಡಲಿದ್ದು, ರಾಜ್ಯದ ಎಲ್ಲಾ ಬಿಜೆಪಿ ಶಕ್ತಿ ಕೇಂದ್ರ ಮತ್ತು ಮಹಾ ಶಕ್ತಿ ಕೇಂದ್ರಗಳಲ್ಲಿ ಮೋದಿ ಭಾಷಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ