ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10ರಂದು ಯಶಸ್ವಿಯಾಗಿ ಮತದಾನ ಮುಗಿದಿದೆ. ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆವರೆಗಿತ್ತು. ಆದರೆ ಕೆಲವೆಡೆ ಇನ್ನೇನು ಸಯಮ ಮುಗಿಯಲು ಬಂದಾಗ ಹೆಚ್ಚು ಹೆಚ್ಚು ಮತದಾರರು ಮತಗಟ್ಟೆಗೆ ಬರಲು ಆರಂಭಿಸಿದ್ದರು. ಹಾಗಾಗಿ ಸಂಜೆ 6 ಗಂಟೆ ಮತದಾನದ ಅವಧಿ ಮುಗಿದಿದ್ದರು, ಬಾಕಿ ಇರುವ ಮತದಾರರ ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಅಂದರೆ ರಾತ್ರಿ 10 ಗಂಟೆವರೆಗೂ ಚುನಾವಣಾಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ಕಾರ್ಯನಿರ್ವಹಿಸಿದ್ದು, ಈ ಕುರಿತಾಗಿ ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಎಡಿಜಿಪಿ ಅಲೋಕ್ ಕುಮಾರ್ ಟ್ವೀಟ್ನಲ್ಲಿ ಏನಿದೆ
ರಾಜದ್ಯ 58,282 ಬೂತ್ಗಳಲ್ಲಿ ರಾತ್ರಿ 10.15ರವರೆಗೆ ಮತದಾನ ಪ್ರಕ್ರಿಯೆ ಸಂಪೂರ್ಣಗೊಂಡಿದೆ. ಹೆಚ್ಚು ಒತ್ತಡದ ವಾತಾವರಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವುದು ಒಂದು ಸವಾಲಿನ ಕೆಲಸ. ಇದಕ್ಕೆ ಸಹಕರಿಸಿದ ಕರ್ನಾಟಕದ ನಾಗರಿಕರಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಬಹುತೇಕ ಮತದಾನವು ಶಾಂತಿಯುತವಾಗಿದ್ದು, ಕರ್ನಾಟಕ ಪೊಲೀಸರ ಕಾರ್ಯಕ್ಷಮತೆಯನ್ನು ಶ್ಲಾಘಿಸಿದ್ದಾರೆ.
ರಾತ್ರಿ 10ರ ತನಕ ಮತದಾನ ಸಾಧ್ಯವಾ?
ನಿನ್ನೆ ನಡೆದ ಮತದಾನ ಪ್ರಕ್ರಿಯೆಗೆ 224 ಕ್ಷೇತ್ರಗಳಲ್ಲಿ ಸಹ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಸಮಯ ನಿಗದಿಪಡಿಸಲಾಗಿತ್ತು. ಆದರೆ ಕೆಲ ಕ್ಷೇತ್ರಗಳಲ್ಲಿ ಸಂಜೆಯಾಗುತ್ತಿದ್ದಂತೆ ರಾಜ್ಯದ ಬಹುತೇಕ ಮತಗಟ್ಟೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದಾರೆ. ಆದರೆ ಅದಕ್ಕೂ ಮುಂಚೆ ಬಂದಿರುವ ಮತದಾರರಿಗೆ ಕೂಪನ್ ನೀಡಿ ಮತಚಲಾವಣೆಗೆ ಅನುವು ಮಾಡಿಕೊಡಲಾಗಿತ್ತು. ಹಾಗಾಗಿ ಈ ಪ್ರಕ್ರಿಯೆ ಮುಗಿಯುವಷ್ಟರಲ್ಲಿ ರಾತ್ರಿ 10 ಗಂಟೆ ಆಗಿದೆ.
224 ಸದಸ್ಯ ಬಲದ ವಿಧಾನಸಭೆಯ ಮತ ಎಣಿಕೆ ಮೇ 13ರಂದು ನಡೆಯಲಿದೆ. ಒಟ್ಟು ಅರ್ಹತೆ ಪಡೆದಿದ್ದ 5,30,85,566 ಮಂದಿ ಮತದಾರರ ಪೈಕಿ ಶೇ.72.67 ರಷ್ಟು (3.85 ಕೋಟಿ) ಮಂದಿ ಮತಚಲಾವಣೆ ಮಾಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರ್ನಾಟಕದಲ್ಲಿ ಮತದಾನಕ್ಕೆ ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆ ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ಪೆಕ್ಟರ್, 2,610 ಪಿಎಸ್ಐ, 5,803 ಎಎಸ್ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇವರೊಂದಿಗೆ 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವತ್ತು ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ.