ಕೂಗು ನಿಮ್ಮದು ಧ್ವನಿ ನಮ್ಮದು

ಮಹದೇಶ್ವರ ಬೆಟ್ಟದ ಮಾದೇಶ್ವರನ ಸನ್ನಿಧಿಯಲ್ಲಿ ಎಲ್ಲ ಸೇವೆಗಳಿಗೂ ಅವಕಾಶ: ನಿರ್ಬಂಧ ಸಡಿಲಿಸಿದ ಜಿಲ್ಲಾಡಳಿತ

ಚಾಮರಾಜನಗರ: ಕೊರೊನ‌ದಿಂದಾಗಿ ವಿಧಿಸಿದ್ದ ನಿರ್ಬಂಧ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟದ ಮಾದಪ್ಪನ‌ ಸನ್ನಿಧಿಯಲ್ಲಿ ನಿನ್ನೆಯಿಂದ ಎಲ್ಲಾ ಸೇವೆಗಳು ಲಭ್ಯವಾಗಿ ಭಕ್ತರು ಮಾದಪ್ಪನ ಚಿನ್ನದ ರಥವನ್ನು ವಿಜೃಂಭಣೆಯಿಂದ ಎಳೆದು ಹರಕೆ ತೀರಿಸಿದರು. ಮಾರ್ಚ್ ತಿಂಗಳಿಂದ ದೇವಾಲಯದ ಹಲವು ಸೇವೆಗಳನ್ನು ಸ್ಥಗಿತಗೊಳಿಸಿ ಕೋವಿಡ್ ನಿಯಮ ಪಾಲನೆಯನ್ವಯ ವಿಶೇಷ ದಿನಗಳು, ಹಬ್ಬ, ಜಾತ್ರೆಯ ದಿನಗಳನ್ನು ಹೊರತು ಪಡಿಸಿ, ಸಾಮಾನ್ಯ ದಿನಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ಸಮಯ ನಿಗದಿಪಡಿಸಿ ಭಕ್ತರಿಗೆ ಮಾದಪ್ಪನ‌ ದರ್ಶನಕ್ಕೆ ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಅವಕಾಶ ಕಲ್ಪಿಸಿಕೊಟ್ಟಿತ್ತು.

ಜಿಲ್ಲಾಡಳಿತ ನಿನ್ನೆಯಿಂದ ಈ ನಿರ್ಬಂಧಗಳನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ಲಾಕ್ ಡೌನ್ ಗೂ ಮೊದಲು ಮಹದೇಶ್ವರ ಬೆಟ್ಟದಲ್ಲಿ ಇದ್ದ ದೇವಾಲಯದ ಸೇವೆಗಳನ್ನು ಒದಗಿಸಿ, ಕೋವಿಡ್ ನಿಯಮದಂತೆ ಪಾಲನೆ ಮಾಡಲು ತಿಳಿಸಿದೆ. ನಿರ್ಬಂಧ ತೆರವಿನಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮುಡಿಸೇವೆ ಹರಕೆ ತೀರಿಸಿದರು. ಅಲ್ಲದೆ ರಾತ್ರಿ ಭಕ್ತರು 2501 ರೂಪಾಯಿ ಕಾಣಿಕೆ ನೀಡಿ ಮಾದಪ್ಪನ ಚಿನ್ನದ ರಥವನ್ನು ಎಳೆದು ಹರಕೆ ತೀರಿಸಿ ಮಾದಪ್ಪನ‌ ಕೃಪೆಗೆ ಪಾತ್ರರಾದರು.

ನಿರ್ಬಂಧ ತೆರೆವುಗೊಳಿಸಿದ ಮೊದಲ ದಿನವೇ 1465 ಭಕ್ತರು ಮುಡಿಸೇವೆ, 471 ಹುಲಿ ವಾಹನ ಸೇವೆ, 50 ಬಸವ ವಾಹನ ಸೇವೆ, 27 ರುದ್ರಾಕ್ಷಿ ಸೇವೆ ಹಾಗೂ 72 ಜನ ಭಕ್ತರು ಚಿನ್ನದ ರಥ ಸೇವೆಯ ಹರಕೆ ತೀರಿಸಿದರು. ಮಲೆ ಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಭಕ್ತರೊಬ್ಬರ ಮುಡಿಸೇವೆಗೆ 50 ರೂಪಾಯಿ, ಹುಲಿವಾಹನ, ಬಸವವಾಹನ ಹಾಗೂ ರುದ್ರಾಕ್ಷಿ ಸೇವೆಗಳಿಗೆ ತಲಾ 200 ರೂಪಾಯಿ ಹಾಗೂ ಚಿನ್ನದ ರಥ ಸೇವೆಗೆ ಭಕ್ತರೊಬ್ಬರಿಗೆ 2501 ರೂಪಾಯಿ ಕಾಣಿಕೆ ನಿಗದಿಮಾಡಿದೆ. ಈ ಎಲ್ಲ ಸೇವೆಗಳಿಂದ ಒಂದೇ ದಿನದಲ್ಲಿ ಮಾದಪ್ಪನಿಗೆ 3,62,922 ರೂ. ಕಾಣಿಕೆಯಾಗಿ ಸಂಗ್ರಹವಾಗಿದೆ.

error: Content is protected !!