ಕೂಗು ನಿಮ್ಮದು ಧ್ವನಿ ನಮ್ಮದು

ಬೆಳಗಾವಿಯಲ್ಲಿ ಲಾರಿ ಹರಿದು ಹತ್ತು ವರ್ಷದ ಬಾಲಕ ದುರ್ಮರಣ, ರೊಚ್ಚಿಗೆದ್ದ ಜನ ಮಾಡಿದ್ದೇನು?

ಬೆಳಗಾವಿ: ಸರಕು ಸಾಗಣೆ ಮಾಡುತ್ತಿದ್ದ ಲಾರಿ ಹರಿದು ಹತ್ತು ವರ್ಷದ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು, ರೊಚ್ಚಿಗೆದ್ದ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಬೆಳಗಾವಿ ಕ್ಯಾಂಪ್ ಪ್ರದೇಶದ ವೆಲ್‌ಕಮ್ ಹೋಟೆಲ್ ಹತ್ತಿರ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಓರ್ವ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಜನ ಪೊಲೀಸರ ಎದುರೇ ಲಾರಿ ಮೇಲೆ ಕಲ್ಲು ತೂರಾಟ ನಡೆಸಿದ್ದು, ಲಾರಿ ಜಖಂಗೊಂಡಿದೆ. ಸದ್ಯ ಬೆಳಗಾವಿ ಕ್ಯಾಂಪ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ದ್ವಿಚಕ್ರ ವಾಹನದಲ್ಲಿ ರಸ್ತೆ ದಾಟುತ್ತಿದ್ದ ಅಕ್ಕ, ತಮ್ಮ ಮತ್ತು ಮತ್ತೊಬ್ಬ ಪಾದಚಾರಿಗೆ ಲಾರಿ ಡಿಕ್ಕಿ ಹೊಡಿದೆ. ಬಳಿಕ ಬಾಲಕನ ಮೇಲೆಯೇ ಲಾರಿ ಹರಿದಿದ್ದು, ಬಾಲಕ ಸಾವಿಗೀಡಾಗಿದ್ದಾನೆ. ಬಾಲಕನ ಅಕ್ಕ ಅತಿಕಾ ಹಾಗೂ ಆಯುಷ್ ಇಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ. ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಡಿಸಿಪಿ ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಹೆಣಗಾಡುತ್ತಿದ್ದಾರೆ.

error: Content is protected !!