ಕೂಗು ನಿಮ್ಮದು ಧ್ವನಿ ನಮ್ಮದು

ಕಟಿಂಗ್ ಮಾಡಿದ್ದಕ್ಕೆ ಸಾಮಾಜಿಕ‌ ಬಹಿಷ್ಕಾರ: ಆತ್ಮಹತ್ಯೆಗೆ ನಿರ್ಧರಿಸಿರುವ ಕ್ಷೌರಿಕ ಕುಟುಂಬ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ ಅನಿಷ್ಟ ಇನ್ನೂ ಜೀವಂತ. ನಾಗರಿಕತೆ ಎಷ್ಟೇ ಮುಂದುವರೆದಿದ್ದರೂ ಸಾಮಾಜಿಕ ಅನಿಷ್ಟ ಪದ್ದತಿಗಳು ಮಾತ್ರ ಜೀವಂತವಾಗಿಯೇ ಇವೆ. ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ಕ್ಷೌರಿಕ ಕುಟುಂಬಕ್ಕೆ ಬಹಿಷ್ಕಾರ ಹಾಕಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮನುಷ್ಯ ಚಂದ್ರ ಗ್ರಹ , ಮಂಗಳ ಗ್ರಹ ತುಪಿದರೂ ಈ ಭೂಮಿ ಮೇಲೆ ಇರುವ ಅನಿಷ್ಟ ಪದ್ದತಿಗಳು ಮಾತ್ರ ಕೊನೆಗೊಂಡಿಲ್ಲ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹಲ್ಲರೆ ಗ್ರಾಮದ ಮಲ್ಲಿಕಾರ್ಜುನ ಶೆಟ್ಟಿ ಎಂಬ ಸವಿತಾ ಸಮಾಜದ ವ್ಯಕ್ತಿ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಹೇರ್ ಕಟಿಂಗ್ ಮಾಡಿದ್ದೇ ಗ್ರಾಮದಲ್ಲಿ ಘನಘೋರ ಅಪರಾಧವಾಗಿದೆ. ಕ್ಷೌರ ಮಾಡಿದ  ಕಾರಣಕ್ಕೆ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಸ್ಥರಿಗೆ ಗ್ರಾಮದ ಮೇಲ್ವರ್ಗದ ಜನ ಸಾಮಾಜಿಕ ಬಹಿಷ್ಕಾರದ ಬರೆ ಎಳೆದಿದ್ದಾರೆ.

ಕೆಲ ದಿನಗಳ ಹಿಂದೆ ಪರಿಶಿಷ್ಠ ವರ್ಗದವರಿಗೆ ಹೇರ್ ಕಟಿಂಗ್ ಮಾಡಬಾರದೆಂದು ಗ್ರಾಮದ ಕೆಲ ಮುಖಂಡರು ಸೇರಿ ಆದೇಶ ಹೊರಡಿಸಿದ್ದರು. ಗ್ರಾಮದ ಮುಖಂಡರಿಗೆ ಹೆದರಿ ಪರಿಶಿಷ್ಟ ಜಾತಿಯವರಿಗೆ ಮಲ್ಲಿಕಾರ್ಜುನ ಶೆಟ್ಟಿ ಹೇರ್ ಕಟಿಂಗ್ ಮಾಡುವುದನ್ನ ನಿಲ್ಲಿಸಿದ್ದರು. ಆದರೆ, ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ಪರಿಶಿಷ್ಟ ಜಾತಿ ವರ್ಗದವರಿಗೂ ಹೇರ್ ಕಟಿಂಗ್ ಮಾಡಬೇಕೆಂದು ಆದೇಶ ಹೊರಡಿಸಿತು. ಗ್ರಾಮದಲ್ಲಿ ಬಲಿಷ್ಟವಾಗಿರುವ ನಾಯಕ ಸಮುದಾಯದ ಮುಖಂಡರ ಆದೇಶ ಧಿಕ್ಕರಿಸಿ ಸರ್ಕಾರದ ಆದೇಶ ಪಾಲಿಸಿದ್ದಕ್ಕೆ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬಕ್ಕೆ ಬಹಿಷ್ಕಾರದ ಬರೆ ಬಿದ್ದಿದೆ.

  • ಬಹಿಷ್ಕಾರದ ಜೊತೆ 50 ಸಾವಿರ ರೂಪಾಯಿ ದಂಡ
  • ಬಹಿಷ್ಕಾರದಿಂದ ಮನನೊಂದು ಆತ್ಮಹತ್ಯೆಗೆ ನಿರ್ಧರಿದ ಕ್ಷೌರಿಕ ಕುಟುಂಬ

ಬಹಿಷ್ಕಾರದ ಜೊತೆಗೆ 50 ಸಾವಿರ ರೂಪಾಯಿ ದಂಡ ಕಟ್ಟುವಂತೆ ನಾಯಕ ಸಮಾಜದ ಮುಖಂಡರು ಪರ್ಮಾನು ಹೊರಡಿಸಿದ್ದು, ಮಲ್ಲಿಕಾರ್ಜುನ ಶೆಟ್ಟಿ ಕುಟುಂಬ ಇದೀಗ ಕಂಗಾಲಾಗಿದೆ. ಈ ರೀತಿಯ ಬಹಿಷ್ಕಾರ, ದಂಡ ಕಟ್ಟುವುದು ಇಲ್ಲಿ ಕಾಮನ್ ಆಗಿದ್ದು, ಇದೇ ಕ್ಷೌರಿಕ ಕುಟುಂಬ ಈಗಾಗಲೇ ಎರಡು ಬಾರಿ ದಂಡ ಕಟ್ಟಿ ಹೈರಾಣರಾಗಿದ್ದಾರೆ. ಇದರಿಂದ ಮನನೊಂದು ನ್ಯಾಯಕ್ಕಾಗಿ ತಹಸೀಲ್ದಾರ್ ಕಚೇರಿಗೆ ಅಲೆಯುತ್ತಿದೆ ಈ ಕುಟುಂಬ. ಇನ್ನು ನ್ಯಾಯ ಸಿಗದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯಲು ನಿರ್ಧಾರ ಮಾಡಿರುವುದರಿಂದ ತಾಲೂಕಿನ ದಲಿತ ಸಂಘರ್ಷ ಸಮಿತಿ‌ ಮುಖಂಡರು ನೆರವಿಗೆ ಆಗಮಿಸಿ ನೊಂದ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅದೇನೇ ಇರಲಿ, ಜಾತ್ಯಾತೀತ ರಾಷ್ಟ್ರ ಎನ್ನುವ ದೇಶದಲ್ಲಿ ಜಾತಿ ತಾರತಮ್ಯ ಹೆಚ್ಚುತ್ತಲೇ ಇದೆ.  ಸಣ್ಣ ಪುಟ್ಟ ಸಮಾಜಗಳು ನಲುಗಿ ಹೋಗಿವೆ. ಬಡವರ ಪರ ಎಂದು ಬೊಬ್ಬೆ ಹೊಡೆಯುವ ಜನನಾಯಕರು ತಕ್ಷಣ ಈ ಕುಟುಂಬದ ನೆರವಿಗೆ ಧಾವಿಸಿ ರಕ್ಷಣೆ ನೀಡಬೇಕಾಗಿದೆ.

error: Content is protected !!