ಬೆಂಗಳೂರು: ಮಡಿವಾಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್ಸ್‌ಟೇಬಲ್ ಆತ್ಮಹತ್ಯೆ ಪ್ರಕರಣದಲ್ಲಿ ಪೇದೆ ಶಿವರಾಜ್ ಶವ ಪತ್ತೆ ಮಾಡಿದ್ದೇ ರೋಚಕವಾಗಿದೆ. ಶಿವರಾಜ್ ಶವ ಪತ್ತೆ ಮಾಡೋಕೆ ಬರೋಬ್ಬರಿ 250 ಸಿಸಿಟಿವಿಗಳನ್ನು ಮಡಿವಾಳ ಪೊಲೀಸರು ಪರಿಶೀಲನೆ ಮಾಡಿದ್ದಾರೆ.
ಸುಬ್ರಮಣ್ಯಪುರ ಪೊಲೀಸರು ಹಾಗೂ ಮಡಿವಾಳ ಪೊಲೀಸರಿಂದ ಪೇದೆ ಶಿವರಾಜ್‌ಗಾಗಿ ಹುಡುಕಾಟ ನಡೆದಿತ್ತು. ಆದರೆ ಶಿವರಾಜ್, ಮಡಿವಾಳ ಪೊಲೀಸ್ ಸಿಬ್ಬಂದಿಯಾದ ಹಿನ್ನೆಲೆ ಇನ್ಸ್ಪೆಕ್ಟರ್ ಸೂಚನೆ ಮೇರೆಗೆ ಮಡಿವಾಳ ಪೊಲೀಸರೇ ಹುಡುಕಾಟ ಶುರು ಮಾಡಿದ್ದರು.
ಸುಬ್ರಹ್ಮಣ್ಯಪುರದಿಂದ ಮೈಸೂರು ರಸ್ತೆಯ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ವರೆಗೂ ಸಿಸಿಟಿವಿ ಪರಿಶೀಲನೆ ಮಾಡಲಾಗಿತ್ತು. ನಿರಂತರ ಐದು ದಿನಗಳಿಂದ ಹುಡುಕಾಟ ನಡೆಸಿದ್ದ ಮಡಿವಾಳ ಪೊಲೀಸರು ಕೊನೆಗೆ ಜ್ಞಾನಭಾರತಿ ಮೆಟ್ರೊ ಸ್ಟೇಷನ್‌ಗೆ ಬಂದು ತಲುಪಿದ್ದಾರೆ. ಈ ವೇಳೆ ಮೆಟ್ರೊ ಸ್ಟೇಷನ್ ಪಾರ್ಕಿಂಗ್‌ನಲ್ಲಿ ಬೈಕ್ ನಿಲ್ಲಿಸಿದ್ದ ಶಿವರಾಜ್ ನಂತರ ನೀರಿನ ಬಾಟಲಿ ಹಿಡಿದು ಬೆಂಗಳೂರು ವಿವಿ ಒಳಗೆ ನಡೆದು ಬಂದಿದ್ದರು.
ಶಿವರಾಜ್ ಬೆಂಗಳೂರು ವಿವಿ ಒಳಗೆ ನಡೆದು ಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಹೀಗಾಗಿ ಬೆಂಗಳೂರು ವಿವಿ ಆವರಣದೊಳಗೆ ಹುಡುಕಾಡಿದ್ದ ಸಂದರ್ಭದಲ್ಲಿ ವಿವಿ ಆವರಣದ ಹಾಳು ಬಿದ್ದ ಬಾವಿಯಲ್ಲಿ ಪೇದೆ ಶಿವರಾಜ್ ಮೃತದೇಹ ತೇಲುತ್ತಿರುವುದು ಪತ್ತೆಯಾಗಿದೆ. ಕೂಡಲೇ ಜ್ಞಾನಭಾರತಿ ಪೊಲೀಸರಿಗೆ ಮಾಹಿತಿ ನೀಡಿದ್ದ ಮಡಿವಾಳ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹ ಹೊರತೆಗೆಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಪೇದೆ ಶಿವರಾಜ್ ಅವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದು, ಮೃತದೇಹ ಹೊರತೆಗೆದಾಗ ಮೃತದೇಹಕ್ಕೆ ಕಲ್ಲು ಕಟ್ಟಿರೋದು ಬೆಳಕಿಗೆ ಬಂದಿದೆ. ಸಿಸಿಟಿವಿಯಲ್ಲಿ ಒಬ್ಬನೇ ಬಂದಿರುವುದರಿಂದ ಇದೊಂದು ಆತ್ಮಹತ್ಯೆ ಎಂಬ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.