ಚಿಕ್ಕಬಳ್ಳಾಪುರ: ಸಾಮಾಜಿಕ ಅರಣ್ಯ ಇಲಾಖೆಯು ಎರಡು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ -ದಿಬ್ಬೂರು ಮಾರ್ಗದ -ಮಂಚನಬಲೆ -ಗುಂಡ್ಲಗುರ್ಕಿ ಕ್ರಾಸ್ ನಡುವಿನ ರಸ್ತೆ ಯುದ್ಧಕ್ಕೂ ನೂರಾರು ಸಸಿಗಳನ್ನು ನೆಟ್ಟಿತ್ತು. ನೆಟ್ಟ ಎಲ್ಲಾ ಸಸಿಗಳು ಅತ್ಯುತ್ತಮವಾಗಿ ಬೆಳೆಯುತ್ತಿದ್ದು, ಭವಿಷ್ಯದಲ್ಲಿ ಅವು ಹೆಮ್ಮರವಾಗಿ ಬೆಳೆದು ಜೀವಿ ಸಂಕುಲಕ್ಕೆ ಆಸರೆಯಾಗುತ್ತಿದ್ದವು. ಆದರೆ ರಸ್ತೆ ಬದಿಯಲ್ಲಿದ್ದ ಬಹುಪಾಲು ಮರಗಳನ್ನು ಇತ್ತೀಚೆಗೆ ಮಾರಣಹೋಮ ಮಾಡಲಾಗಿದೆ. ಸಾಮಾಜಿಕ ಅರಣ್ಯ ಇಲಾಖೆ ನೆಟ್ಟ ಗಿಡಗಳನ್ನು ಪಾಲನೆ, ಪೋಷಣೆ ಮತ್ತು ಸಂರಕ್ಷಣೆ ಮಾಡಲು ಹಲವಾರು ನೌಕರರನ್ನು ನೇಮಕ ಮಾಡಲಾಗಿದೆ. ಕಳೆದ ವಾರ ಬೆಳೆಯುತ್ತಿದ್ದ ನೂರಾರು ಮರಗಳು ಕಗ್ಗೊಲೆಯಾಗಿವೆ.
ಇದು ಬೆಸ್ಕಾಂ ಕೃತ್ಯವೆಂದು ಅರಣ್ಯ ಇಲಾಖೆ ಸಿಬ್ಬಂದಿ ಹೇಳುತ್ತಿದ್ದಾರೆ. ರಸ್ತೆಯ ಬದಿಯಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಲು ಸಾಕಷ್ಟು ಸ್ಥಳಾವಕಾಶವಿದೆ ಹಾಗೂ ಬೆಳೆಯುತ್ತಿರುವ ಸಸಿಗಳು ತಾಕುವಷ್ಟು ಎತ್ತರಕ್ಕೆ ಬೆಳೆದಿಲ್ಲ. ಹಾಗಿದ್ದರೂ ಸಹ ಮರಗಳ ಮಾರಣಹೋಮ ನಡೆಸಿರುವುದು ಪರಿಸರ ಪ್ರೇಮಿಗಳಲ್ಲಿ ತೀವ್ರ ದುಃಖ ನೋವನ್ನು ಉಂಟು ಮಾಡಿದೆ. ಈ ಎರಡು ಇಲಾಖೆಗಳು ಈ ಕೃತ್ಯಕ್ಕೆ ಸಮಾನ ಪಾಲುದಾರರಾಗಿದ್ದು ಸಸಿಗಳನ್ನು ನೆಡಲು ಹಾಗೂ ಪೋಷಿಸಲು ಸಾರ್ವಜನಿಕ ಹಣವನ್ನು ಪೋಲು ಮಾಡಲಾಗಿದೆ. ಆದಕಾರಣ ಕಗ್ಗೊಲೆಯಾದ ಎಲ್ಲಾ ಮರಗಳ ಐದು ಪಟ್ಟು ಸಸಿಗಳನ್ನು ನೆಟ್ಟು ಮೂರು ವರ್ಷಗಳ ಕಾಲ ಅವುಗಳನ್ನು ಪೋಷಿಸುವ ಜವಾಬ್ದಾರಿಯನ್ನು ಸಂಬಂಧಪಟ್ಟ ಇಲಾಖೆಗಳು ವಹಿಸಿಕೊಳ್ಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಉಸಿರಿಗಾಗಿ ಹಸಿರು ಟ್ರಸ್ಟ್ ಮತ್ತು ಬಾಗೇಪಲ್ಲಿಯ ಹಸಿರು ಸ್ವಯಂ ಸೇವಾ ಸಂಸ್ಥೆ ಹಾಗೂ ಆಶಾ ಫೌಂಡೇಶನ್ (ರಿ.) ಮಂಚನಬಲೆ ಹಾಗೂ ಇತರೆ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಇಂದು 03/07/2022 ಭಾನುವಾರದಂದು ಕೊಲೆಯಾದ ಹರೆಯದ ಮರಗಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಹಾಗೆ ಸಂಜೆ 4.30 ಗಂಟೆಗೆ ಗುಂಡ್ಲುಗುರ್ಕಿ ಕ್ರಾಸ್ ನಿಂದ ಆರಂಭವಾಗುವ ಕಾಲ್ನಡಿಗೆ ಜಾಥಾ ಮಂಚನ ಬಲೆ ಗ್ರಾಮದಲ್ಲಿ ಮುಕ್ತಾಯಗೊಳ್ಳಲಿದೆ. ಮಾರ್ಗದ ಮಧ್ಯದಲ್ಲಿ ಕೊಲೆಯಾದ ಮರಗಳಿಗೆ ಪೂಜೆಯನ್ನು ಸಲ್ಲಿಸಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಗುವುದು. ತದನಂತರ ಸಂಜೆ 6 ಗಂಟೆಗೆ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ವೃತ್ತದ ಮಧ್ಯದಲ್ಲಿ ಮಾನವ ಸರಪಳಿಯನ್ನು ರಚಿಸಿ ಮೊಂಬತ್ತಿಗಳನ್ನು ಬೆಳಗುವುದರ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಮರ್ಪಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಸಮಾನ ಮನಸ್ಕ ಪರಿಸರ ಪ್ರೇಮಿಗಳು, ಶಾಲಾ ವಿದ್ಯಾರ್ಥಿಗಳು, ಹಸಿರು ಸೇವಾ ಸಂಸ್ಥೆ ಉಸಿರಿಗಾಗಿ ಹಸಿರು ಟ್ರಸ್ಟ್ ಹಾಗೂ ಆಶಾ ಫೌಂಡೇಶನ್ (ರಿ.) ಸದಸ್ಯರು ಭಾಗವಹಿಸಲಿದ್ದಾರೆ.