ಕೂಗು ನಿಮ್ಮದು ಧ್ವನಿ ನಮ್ಮದು

ವಿಶಿಷ್ಟ ಚೇತನರಿಗೆ ಆಧ್ಯತೆಯ ಅಡಿ ವ್ಯಾಕ್ಸಿನ್

ಬೆಳಗಾವಿ: ಕೊರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ಆರಂಭದಲ್ಲಿ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ಚುಚ್ಚುಮದ್ದು ಪಡೆಯಲು ಸರ್ಕಾರ ಉಚಿತವಾಗಿ ವ್ಯವಸ್ಥೆ ಮಾಡಿದ ಸಮಯದಲ್ಲಿ ಮೊದಲ ಹಂತವಾಗಿ ಫ್ರಂಟ್ ಲೈನ್ ವಾರಿಯರ್ ಗಳಿಗೆ ಚುಚ್ಚುಮದ್ದು ನೀಡಿದ ಬಳಿಕ ವ್ಯಾಕ್ಸಿನ್ ಅಡ್ಡ ಪರಿಣಾಮಗಳ ಬಗ್ಗೆ ಹರಡಿದ ವದಂತಿಗಳಿಂದಾಗಿ ಜನರು ವ್ಯಾಕ್ಸಿನ್ ಪಡೆಯಲು ಹಿಂದೇಟು ಹಾಕಿದ್ದರು. ಆದರೆ ಎರಡನೆಯ ಅಲೆ ಆರಂಭವಾಗುತ್ತಿದ್ದಂತೆಯೆ ಸಾವು ನೋವಿನ ಪ್ರಮಾಣದಲ್ಲಿ ಹೆಚ್ಚಳ ಕಂಡು, ಭಯಗೊಂಡ ಜನರು ಏಕಕಾಲಕ್ಕೆ ವ್ಯಾಕ್ಸಿನ್ ಪಡೆಯಲು ಮುಂದಾಗಿದ್ದರಿಂದ ಔಷಧಿ ಕೊರತೆ ಎದುರಾಗಿತ್ತು. ವಯೋಮಿತಿ ಆಧಾರದಲ್ಲಿ ವ್ಯಾಕ್ಸಿನ್ ನೀಡಲು ಮುಂದಾದ ಸರ್ಕಾರ ಮತ್ತೆ ಔಷಧಿ ಕೊರತೆಯನ್ನು ಎದುರಿಸಿದ್ದರಿಂದ ಹೆಚ್ಚಿನ ಔಷಧಿ ಲಭ್ಯ ಆಗುವವರೆಗೂ ವ್ಯಾಕ್ಸಿನ್ ನೀಡುವದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆ ನಡುವೆಯೆ 18 ರಿಂದ 45 ವಯಸ್ಸಿನವರಿಗೂ ಕೋವಿಶಿಲ್ಡ್ ಮತ್ತು ಕೋವ್ಯಾಕ್ಸಿನ್ ನೀಡಲು ಸರ್ಕಾರ ಹಸಿರು ನಿಶಾನೆ ತೋರಿಸಿದ್ದು ವಿಶಿಷ್ಟ ಚೇತನರಿಗೂ ಕೂಡ ಮೊದಲ ಆದ್ಯತೆ ಮೆರೆಗೆ ಕೊರೊನಾ ನಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ.

ಈಗಾಗಲೇ ಅಥಣಿ ಮತ್ತು ಕಾಗವಾಡ ತಾಲ್ಲೂಕು ವ್ಯಾಪ್ತಿಯಲ್ಲಿ ಒಟ್ಟು 9444 ವಿಶಿಷ್ಟ ಚೇತನರಿದ್ದು ಆ ಪೈಕಿ ಅಂದಾಜು 300 ಜನರಿಗೆ ಕೋವಿಶಿಲ್ಡ ಚುಚ್ಚುಮದ್ದು ನೀಡಲಾಗಿದೆ.
ಅಥಣಿ ತಾಲೂಕಿನ ದರೂರ, ನದಿ ಇಂಗಳಗಾಂವ, ಸಪ್ತಸಾಗರ, ಖವಟಕೊಪ್ಪ, ಶಿರಹಟ್ಟಿ, ರಡ್ಡೇರಟ್ಟಿ, ಅವರಕೋಡ, ಪಿ.ಕೆ.ನಾಗನೂರ ಸೇರಿದಂತೆ ಹಲವು ಗ್ರಾಮಗಳ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮೊದಲ ಆದ್ಯತೆ ಮೆರೆಗೆ ವಿಕಲ ಚೇತನರಿಗೆ ಕೋವಿಶಿಲ್ಡ ವ್ಯಾಕ್ಸಿನ್ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆಯುವಂತೆ ತಾಲ್ಲೂಕು ಪಂಚಾಯತ ಅಧಿಕಾರಿ ರವಿ ಬಂಗಾರಪ್ಪನವರ ತಾಲೂಕಿನ ವಿಕಲ ಚೇತನರಲ್ಲಿ ಮನವಿ ಮಾಡಿದ್ದಾರೆ. ದರೂರ ಗ್ರಾಮದಲ್ಲಿ ವಿಕಲ ಚೇತನರಿಗೆ ಚುಚ್ಚುಮದ್ದು ನೀಡಿದ ಸಮಯದಲ್ಲಿ ದರೂರ ಗ್ರಾಮದ ಆಸ್ಪತ್ರೆ ಸಿಬ್ಬಂದಿ ಮತ್ತು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು

error: Content is protected !!