ಕೂಗು ನಿಮ್ಮದು ಧ್ವನಿ ನಮ್ಮದು

ಕುರ್ಚಿಗೆ ಅಂಟ್ಕೊಂಡು ಕುಳಿತಿರುವ ಬಿಜೆಪಿಯನ್ನು ಒದ್ದೋಡಿಸಬೇಕು: ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು: ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಬಂಧನ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆಗೆ ಆಗ್ರಹಿಸಿ ಶನಿವಾರ ಕಾಂಗ್ರೆಸ್‌ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಿತು. ಬೆಂಗಳೂರಿನಲ್ಲಿ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಹರಿಹಾಯ್ದರು. ‘ ಇಂದು ಕೆಪಿಸಿಸಿ ವತಿಯಿಂದ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕೃತ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

ಇದಕ್ಕೆ ಕಾರಣ ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರದ ಭ್ರಷ್ಟಾಚಾರ. ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಸರ್ಕಾರ ಯಾವಾಗಲೂ ಬಂದಿಲ್ಲ. ನಾನು 1983 ರಿಂದಲೂ ನಾನು ರಾಜಕೀಯದಲ್ಲಿ ಇದ್ದೇನೆ. ನನ್ಮ ರಾಜಕೀಯ ಜೀವನದಲ್ಲಿ ಇಂಥಾ ಭಂಡ, ಭ್ರಷ್ಟ, ಸುಳ್ಳು ಹೇಳುವಂಥ ಸರ್ಕಾರ ನೋಡಿಲ್ಲ. ಸುಳ್ಳು ಹೇಳುವುದನ್ನ ಕರಗತ ಮಾಡಿಕೊಂಡಿದ್ದಾರೆ. ನರೇಂದ್ರ ಮೋದಿ, ಅಮಿತ್‌ ಶಾ, ನಳೀನ್‌ ಕುಮಾರ್‌ ಕಟೀಲ್‌, ಜೆಪಿ ನಡ್ಡಾ ಎಲ್ಲಾ ಸುಳ್ಳು ಹೇಳುವವರೇ, ಅದಕ್ಕಿಂತ ದೊಡ್ಡ ಸುಳ್ಳ ಬಸವರಾಜ್‌ ಬೊಮ್ಮಾಯಿ. ನಾವು ಈ ಸರ್ಕಾರದ ಭ್ರಷ್ಟಾಚಾರದ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ಯಾವಾಗಲೂ ದಾಖಲೆ ಕೊಡಿ ಅಂತ ಹೇಳ್ತಿದ್ದರು. ಹಿಂದಿನ ಸರ್ಕಾರ ಭ್ರಷ್ಟಾಚಾರ ಮಾಡಿಲ್ವಾ ಅಂತಾ ಹೇಳ್ತಿದ್ದರು. ಈಗ ಎಲ್ಲದಕ್ಕೂ ಸಾಕ್ಷಿ ಸಿಕ್ಕಿದೆ’ ಎಂದು ಸಿದ್ಧರಾಮಯ್ಯ ಹೇಳಿದರು.
ಪಿಎಸ್ಐ ಹಗರಣದಲ್ಲಿ ಐಪಿಎಸ್ ಅರೆಸ್ಟ್ ಆದರು. ಸುಮ್ಮನೆ ಅರೆಸ್ಟ್ ಆದ್ರಾ..? ಭ್ರಷ್ಟಾಚಾರ ಮಾಡಿಲ್ವಾ? ಇದಕ್ಕಿಂತ ದಾಖಲೆ ಬೇಕಾ. ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ. ಆತ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಪಾಪ..ಕೆಲಸ ಮಾಡಿದರೂ ಅವರಿಗೆ ಬಿಲ್ ಸಿಗಲಿಲ್ಲ. ಯಾಕಂದ್ರೆ ಈಶ್ವರಪ್ಪ 40% ಕಮಿಷನ್ ಕೇಳಿದ. ಅವನ ಕೈಯಲ್ಲಿ ‌ಕೊಡೋದಕ್ಕೆ ಆಗಲಿಲ್ಲ. ನಾವು ಅವರ ಮನೆಗೆ ಹೋಗಿದ್ದೆವು. ಅವನ ಪತ್ನಿ ಹಾಗೂ ತಾಯಿ, ಸಂತೋಷ್‌ ಪಾಟೀಲ್‌ ಸಾವಿಗೆ ಈಶ್ವರಪ್ಪನೇ ನೇರ ಕಾರಣ ಎಂದಿದ್ದರು. ನಾವು ಅಹೋರಾತ್ರಿ ಧರಣಿ ಮಾಡಿದೆವು. ಈಶ್ವರಪ್ಪ ರಾಜೀನಾಮೆ ಕೊಟ್ಟ. ಸುಮ್‌ಸುಮ್ನೆ ಈಶ್ವರಪ್ಪ ರಾಜಿನಾಮೆ ಕೊಟ್ನಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.

ನೇಮಕಾತಿ, ವರ್ಗಾವಣೆಯಲ್ಲಿ ಲಂಚ . ಪ್ರೊಫೆಸರ್, ಶಿಕ್ಷಕರ ನೇಮಕದಲ್ಲೂ ಲಂಚ ತೆಗೆದುಕೊಂಡರು. ಜನಪರವಾದ ಸರ್ಕಾರ ಯಾವುದೇ ಆರೋಪ ಬಂದಾಗ, ಅದರಿಂದ ಮುಕ್ತರಾಗಬೇಕು. ಅದು ಸರ್ಕಾರದ ಕರ್ತವ್ಯ. ನಾನು 8 ಕೇಸ್ ಗಳನ್ನ ಸಿಬಿಐಗೆ ವಹಿಸಿದ್ದೆ. ಡಿಕೆ ರವಿ ಕೇಸ್ ನಲ್ಲಿ ಇವರು ದಾಖಲೆ ಕೊಟ್ಟಿದ್ದರೇ? ಗಣಪತಿ ಆತ್ಮಹತ್ಯೆ ಕೇಸಲ್ಲಿ ಜಾರ್ಜ್ ಪಾತ್ರ ಇಲ್ಲದೇ ಇದ್ರೂ ರಾಜಿನಾಮೆ ನೀಡಿದರು. ಸಿಂಗಲ್ ನಂಬರ್ ಲಾಟರಿ ಕೇಸಲ್ಲಿ ಕುಮಾರಸ್ವಾಮಿ, ದೇವೇಗೌಡರು ಆರೋಪ ಮಾಡಿದರು. ನಾನು ಸಿಬಿಐಗೆ ವಹಿಸಿದೆ, ಅದು ಬಿ ರಿಪೋರ್ಟ್ ಬಂತು. ಪರೇಶ್ ಮೇಸ್ತಾ ಕೊಲೆ ಅಂತ ಹೋರಾಟ ಮಾಡಿದರು. ನಾನು ಸಿಬಿಐಗೆ ವಹಿಸಿದೆ, ಬಿ ರಿಪೋರ್ಟ್ ಬಂತು. ಈ ಭಂಡ ಸರ್ಕಾರ ಕುರ್ಚಿಗೆ ಅಂಟಿಕೊಂಡು ಲೂಟಿ ಹೊಡಿತಿದೆ ಎಂದು ಹೇಳಿದರು.

ಈ ಸರ್ಕಾರದಲ್ಲಿ ಎಲ್ಲವೂ ನಿಗದಿ ಆಗಿದೆ. ಈ ಹುದ್ದೆಯಲ್ಲಿ ಇರುವವರು ಇಷ್ಟಿಷ್ಟು ಲೂಟಿ ಮಾಡಬೇಕು ಅಂತ. ಇವರು ದುಡ್ಡಿನಿಂದ ಈ ಸಾರಿ ಚುನಾವಣೆ ಗೆಲ್ಲಲು ರೆಡಿಯಾಗಿದ್ದಾರೆ. ಈ ಬಾರಿ 100 ಕೋಟಿ ಒಂದು ಕ್ಷೇತ್ರದಲ್ಲಿ ಖರ್ಚು ಮಾಡಲು ಹೊರಟಿದ್ದಾರೆ. ಜನರೇ ಇವರಿಗೆ ಪಾಠ ಕಲಿಸಬೇಕು ಬಸವರಾಜ್ ಬೊಮ್ಮಾಯಿ ಅವರಿಗೆ ನಿಮಗೆ ಕಿಂಚಿತ್ತು ಮಾನ ಮರ್ಯಾದೆ ಇದ್ದರೆ, ಮಾಡಾಳ್ ವಿರೂಪಾಕ್ಷಪ್ಪ ಅವರನ್ನ ಕೂಡಲೇ ಬಂಧಿಸಬೇಕು. ನೈತಿಕ ಹೊಣೆ ಹೊತ್ತು ಬೊಮ್ಮಾಯಿ ರಾಜಿನಾಮೆ ಕೊಡಬೇಕು ಎಂದು ಸಿದ್ಧರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

ಎಂಟು ಕೋಟಿ ಹಣ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದಕ್ಕಿಂತ ದಾಖಲೆ ಬೇಕಾ ಅಮಿತ್ ಶಾ ಬಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ಸರ್ಕಾರ ಎಟಿಎಂ‌ ಆಗಿತ್ತು ಅಂತ ಹೇಳ್ತಾರೆ. ಈಗ ಹೇಳಿ ಮಿಸ್ಟರ್ ಶಾ… ಇದೇನು? ಯಾವುದೇ ಆಧಾರ ಇಲ್ಲದೇ ಸಿದ್ದರಾಮಯ್ಯ ಸರ್ಕಾರ ಎಟಿಎಂ ಅಂದಿದ್ದರು. ಈಗ ಏನ್ ಹೇಳುತ್ತೀರಾ ಮಿಸ್ಟರ್ ಶಾ ಎಂದು ಪ್ರಶ್ನೆ ಮಾಡಿದರು.

ಸಿಂಪಥಿ ಮೋದಿ: ಮೋದಿ ಹೇಳ್ತಾರೆ ಮರ್ ಜಾ ಮೋದಿ ಅಂತಿದಾರೆ ಅಂತ. ನಿಮ್ಮದೇ ಸರ್ಕಾರದ ರಾ, ಸಿಬಿಐ, ಎನ್ಐಎ ಇದೆ ತನಿಖೆ ಮಾಡಿಸಿ ಪತ್ತೆ ಮಾಡಿ. ಯಾರೂ ಹೇಳದೇ ಇದ್ದರೂ ಸಿಂಪಥಿಗಾಗಿ ತಮಗೆ ತಾವೇ ಹೇಳಿಕೊಳ್ತಾರೆ. ಯಾಕೆಂದರೆ ಇವರ ಜನಪ್ರಿಯತೆ ಕಡಿಮೆ ಆಗಿದೆ. ಅದಕ್ಕೆ‌ ಇಂಥವನ್ನು ಹೇಳಿಕೊಂಡು ಸಿಂಪಥಿ ಗಿಟ್ಟಿಸುತ್ತಿದ್ದಾರೆ ಎಂದರು. ಎಐಸಿಸಿ ಅಧ್ಯಕ್ಷರಿಗೆ ಹೇಗೆ ಗೌರವ ಕೊಡಬೇಕು ಎನ್ನುವುದು ನಿಮ್ಮಿಂದ ಕಲಿಯಬೇಕಿಲ್ಲ. ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಅವರನ್ನ ಸೈಡ್ ಲೈನ್ ಮಾಡಿದ್ದು ನೀವು. ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದ್ದು ನೀವು. ಯಡಿಯೂರಪ್ಪ ಅವರಿಂದ ಕಣ್ಣೀರು ಬರಿಸಿ ತೆಗೆದು ಹಾಕಿದವರು ನೀವು. ಯಡಿಯೂರಪ್ಪ ಇವರು ಹೇಳಿದ್ದು ಹಣ ಕೊಡಲಿಲ್ಲ ಅಂತ ಕಾಣುತ್ತೆ ಅದಕ್ಕೆ ಯಡಿಯೂರಪ್ಪ ಅವರನ್ನ ತೆಗೆದರು. ಇವರು ಹೇಳಿದಂತೆ ಕೇಳುವ ಬೊಮ್ಮಾಯಿ ಅವರನ್ನ ಸಿಎಂ ಮಾಡಿದರು ಎಂದು ಆರೋಪಿಸಿದರು.

ಯಾರೂ ಟೆಂಡರ್‌ ತೆಗೆದುಕೊಳ್ಳಬೇಡಿ ಎಂದು ಎಚ್ಚರಿಸಿದ ಸಿದ್ಧರಾಮಯ್ಯ: ಈಗ ಕಾಲ ಬಂದಿದೆ. ಲಂಚ ತೆಗೆದುಕೊಳ್ಳೋದು ಕಡಿಮೆ ಆಗುತ್ತೆ. ನಾವು ಅಧಿಕಾರಕ್ಕೆ ಬಂದೆ ಬರ್ತೇವೆ. ನಾವು ಬಂದ‌ ಮೇಲೆ ಆರು ತಿಂಗಳು ಹಿಂದ ಕೊಟ್ಟಿರುವ ಟೆಂಡರ್ ಗಳನ್ನ ಪರಿಶೀಲನೆ ಮಾಡುತ್ತೇವೆ. ಲಂಚ‌ ಕೊಟ್ಟು ಟೆಂಡರ್ ಪಡೆದಿರುವುದನ್ನ ರದ್ದು ಮಾಡುತ್ತೇವೆ. ಹಾಗಾಗಿ ಯಾರು ಟೆಂಡರ್ ತೆಗೆದುಕೊಳ್ಳಬೇಡಿ ಎಂದು ಹೇಳುವ ಮೂಲಕ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು. ಸೋಪ್ ಅಂಡ್ ಡಿಟರ್ಜೆಂಟ್ ನಲ್ಲಿ 1.20 ಕೋಟಿ ಕಮಿಷನ್ ಮಾತಾಡಿ 80 ಲಕ್ಷ ಡೀಲ್‌ ಆಗಿತ್ತು. 40 ಲಕ್ಷ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದಿದ್ದಾರೆ. ಶಾಸಕರಿಂದ ಲೆಟರ್ ತಗೊಂಡು ಹೋಗಿ 10, 20 ಪರ್ಸೆಂಟ್ ಕೊಟ್ಟು ಆರ್ಡರ್ ಮಾಡಿಸಿಕೊಳ್ಳೋದು.. ನಮ್ಮ ಸರ್ಕಾರದಲ್ಲಿ ಎನ್ ಓಸಿಗೆ 5 ಪರ್ಸೆಂಟ್ ಕೂಡ ತಗೊಂಡಿಲ್ಲ. ಇವರು ಬರೀ ಲಂಚ ಲಂಚ ಎಂದು ಹೇಳಿದರು.

ಇವರು ಮಹಾತ್ಮ ಗಾಂಧೀಜಿಯನ್ನ ಕೊಂದು ಹಾಕಿದವರು. ಅವರ ಸಚಿವ ಅಶ್ವಥ್ ನಾರಾಯಣ್‌, ಸಿದ್ದರಾಮಯ್ಯರನ್ನ ಟಿಪ್ಪು ಮುಗಿಸಿದಂತೆ ಮುಗಿಸಬೇಕು ಅಂತಾನೆ. ಅವನು ಸಚಿವನಾಗೋಕೆ ನಾಲಾಯಕ್, ಕಟೀಲ್‌ ಕೊಲೆಗಡುಕ. ಮರ್ ಜಾ ಮೋದಿ ಅಂತೀಯಲ್ಲ ಮೋದಿ ಯಾವತ್ತಾದ್ರು ಅಶ್ವಥ್ ನಾರಾಯಣಗೆ ಬುದ್ದಿ ಹೇಳಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ

error: Content is protected !!