ಕೂಗು ನಿಮ್ಮದು ಧ್ವನಿ ನಮ್ಮದು

ಕಾರವಾರ: ಮದುವೆಗೆ ಕರೆಯುವ ನೆಪದಲ್ಲಿ ಚಾಕುವಿನಿಂದ ಹಲ್ಲೆ ನಡೆಸಿ ಮನೆ ಕಳ್ಳತನಕ್ಕೆ ಯತ್ನ, ಬಂದೂಕು ತೋರಿಸುತ್ತಿದ್ದಂತೆ ಪರಾರಿ

ಕಾರವಾರ: ಮದುವೆಗೆ ಕರೆಯುವ ನೆಪದಲ್ಲಿ ಚಾಕು ತೋರಿಸಿ ಮನೆ ಕಳ್ಳತನ ಮಾಡಲು ಯತ್ನ ನಡೆದಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಿನ್ನೆ(ಮಾರ್ಚ್ 03) ರಾತ್ರಿ ನಡೆದಿದೆ. ವ್ಯಕ್ತಿಯೋರ್ವ ಮದುವೆಗೆ ಆಮಂತ್ರಣ ಕೊಡಲು ಬಂದಿದ್ದಾಗಿ ಹೇಳಿ ಮನೆಗೆ ನುಗ್ಗಿ ಬಳಿಕ ಕುಟುಂಬಸ್ಥರ ಮೇಲೆ ದಾಳಿ ನಡೆಸಿ ಮನೆ ಕಳ್ಳತನಕ್ಕೆ ಯತ್ನಿಸಿದ್ದಾನೆ.

ಶಿರಸಿ ತಾಲೂಕಿನ ಮಂಡೆಮನೆಯ ಜಿ.ಆರ್.ಹೆಗಡೆ ಎಂಬುವರ ಮನೆಗೆ ಅಪರಿಚಿತ ವ್ಯಕ್ತಿಯೊಬ್ಬ ಮದುವೆಗೆ ಕರೆಯಲು ಬಂದಿದ್ದಾಗಿ ಹೇಳಿಕೊಂಡು ಮನೆ ಬಾಗಿಲು ತಟ್ಟಿದ್ದಾನೆ. ಊರಿನವರು ಅಥವಾ ದೂರದ ಸಂಬಂಧಿಕರು ಇರಬಹುದು ಎಂದು ಮನೆಯವರು ಬಾಗಿಲು ತೆರೆದಿದ್ದಾರೆ. ಈ ವೇಳೆ ತಕ್ಷಣ ಚಾಕುವಿನಿಂದ ಮನೆಯ ಯಜಮಾನನ ಮೇಲೆ ಹಲ್ಲೆ ನಡೆಸಿದ್ದು ಜಿ.ಆರ್.ಹೆಗಡೆ ಅವರ ಕೈಗೆ ಗಾಯವಾಗಿದೆ. ಈ ಗಲಾಟೆ ಕೇಳಿ ಜಿ.ಆರ್.ಹೆಗಡೆಯವರ ಮಗ ಮನೆಯಲ್ಲಿದ್ದ ಬಂದೂಕನ್ನು ತೆಗೆದುಕೊಂಡು ಬಂದಿದ್ದಾರೆ. ಆಗ ಮಗ ಬಂದೂಕು ತರುತ್ತಿದ್ದಂತೇ ಕಳ್ಳ ಸ್ಥಳದಿಂದ ಪರಾರಿಯಾಗಿದ್ದಾನೆ. ಕಳ್ಳ ಮನೆಗೆ ಬಂದು ಪರಾರಿಯಾಗುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮನೆ ಮಾಲೀಕ ಕೂಡಲೇ ಶಿರಸಿ ಗ್ರಾಮೀಣ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಸಿಟಿವಿ ದೃಶ್ಯಾವಳಿ ಹಾಗೂ ಚಾಕುವಿನಿಂದ ಉಂಟಾದ ಗಾಯದ ಚಿತ್ರಗಳು ಹರಿದಾಡುತ್ತಿವೆ. ಸದ್ಯ ಶಿರಸಿ ಗ್ರಾಮೀಣ ಭಾಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಶೀಘ್ರವಾಗಿ ಆರೋಪಿಯನ್ನು ಬಂಧಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ

error: Content is protected !!