ಚೀನಾದಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಕಳೆದ ಎರಡು ವರ್ಷಗಳಿಂದ ಪ್ರೀತಿಯಿಂದ ಸಾಕ್ತಿದ್ದ ನಾಯಿ, ನಾಯಿಯೇ ಅಲ್ಲ ಎಂಬ ವಿಷ್ಯ ತಿಳಿದ ಮನೆಯವರು ಕಂಗಾಲಾಗಿದ್ದಾರೆ. ಅವರು ಸಾಕುತ್ತಿದ್ದ ಮುದ್ದಾದ ನಾಯಿ ಮರಿ ವಿಚಿತ್ರ ಜಾತಿಯ ಕರಡಿ ಎಂದು ಮನೆಯವರಿಗೆ ಗೊತ್ತಾಗಿದೆ. ನ್ಯೂಯಾರ್ಕ್ ಪೋಸ್ಟ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಘಟನೆ ಚೀನಾ ದಲ್ಲಿ ನಡೆದಿದೆ. ಇಲ್ಲಿನ ಯುನ್ನಾನ್ ಪ್ರಾಂತ್ಯದ ಹಳ್ಳಿಯೊಂದರಲ್ಲಿ ವಾಸಿಸುವ ಸು ಯುನ್ ಮನೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 2016 ರಲ್ಲಿ ರಜೆಯ ಸಂದರ್ಭದಲ್ಲಿ ಸು ಯುನ್ ಕುಟುಂಬ ನಾಯಿ ಯೊಂದನ್ನು ಖರೀದಿ ಮಾಡಿತ್ತು. ಇದು ಟಿಬೆಟಿಯನ್ ಮ್ಯಾಸ್ಟಿಫ್ ನಾಯಿ ಎಂದು ಅವರು ನಂಬಿದ್ದರು.
ನಾಲ್ಕು ಕಾಲಿನ ಬದಲು 2 ಕಾಲಿನಲ್ಲಿ ನಡೆಯಲು ಶುರು ಮಾಡಿದ `ನಾಯಿ’ : ಎರಡು ವರ್ಷಗಳ ನಂತರ ಅದು ಬೆಳೆದಾಗ ಅದ್ರಲ್ಲಿ ವಿಚಿತ್ರ ವರ್ತನೆ ಕಂಡುಬಂದಿತ್ತು. ಇವರು ನಾಯಿ ಎಂದುಕೊಂಡಿದ್ದ ಪ್ರಾಣಿಯ ತೂಕ ಸುಮಾರು 250 ಪೌಂಡ್ ಅಂದ್ರೆ ಸುಮಾರು 114 ಕೆಜಿಯಾಗಿತ್ತು. ನಾಲ್ಕು ಕಾಲಿನ ಮೇಲೆ ನಡೆಯುವ ಬದಲು ಇದು ಎರಡು ಕಾಲುಗಳ ಮೇಲೆ ನಡೆಯಲು ಪ್ರಾರಂಭಿಸಿತ್ತು. ಕುಟುಂಬದವರಿಗೆ ಈ ವೇಳೆ ಅನುಮಾನ ಬಂದಿತ್ತು. ಸರಿಯಾಗಿ ಪರೀಕ್ಷೆ ಮಾಡಿದಾಗ ಅದು ಟಿಬೆಟಿಯನ್ ಮ್ಯಾಸ್ಟಿಫ್ ನಾಯಿಯಲ್ಲ, ಏಷ್ಯಾದ ಕಪ್ಪು ಕರಡಿ ಎಂಬುದು ಸು ಯುನ್ ಕುಟುಂಬಕ್ಕೆ ತಿಳಿಯಿತು.
ನಾಯಿ ತಿನ್ನೋದನ್ನು ನೋಡಿ ಕಂಗಾಲಾಗಿದ್ದ ಸು ಯುನ್: ಸು ಯುನ್, ತನ್ನ ನಾಯಿ ತಿನ್ನೋದನ್ನು ನೋಡಿ ಅಚ್ಚರಿಗೊಂಡಿದ್ದಳು. ಯಾಕೆಂದ್ರೆ ನಾಯಿಗೆ ಒಂದೋ ಎರಡೋ ಬ್ರೆಡ್ ಸಾಲ್ತಿರಲಿಲ್ಲ. ಪ್ರತಿದಿನ ಒಂದು ಪೆಟ್ಟಿಗೆಯಲ್ಲಿ ಹಣ್ಣುಗಳು ಮತ್ತು ಎರಡು ಬಕೆಟ್ ನೂಡಲ್ಸ್ ಅನ್ನು ತಿನ್ನುತ್ತಿತ್ತು. ಅದು ಬೆಳೆದಂತೆ ಕರಡಿಯಂತೆ ಕಾಣಲು ಶುರುವಾಗಿತ್ತು.
ಅಧಿಕಾರಿಗಳನ್ನು ಭೇಟಿಯಾಗಿ ಕ್ರಮಕೈಗೊಂಡ ಸುಯುನ್: ಎರಡು ವರ್ಷಗಳ ನಂತ್ರ ನಮ್ಮ ಮನೆಯಲ್ಲಿ ಬೆಳೆಯುತ್ತಿರೋದು ನಾಯಿಯಲ್ಲ ಎಂಬುದು ಗೊತ್ತಾಗ್ತಿದ್ದಂತೆ ಸುಯುನ್ ಕ್ರಮಕೈಗೊಂಡಿದ್ದಾಳೆ. ಕಾಡು ಪ್ರಾಣಿಗಳನ್ನು ಖಾಸಗಿಯಾಗಿ ಸಾಕುವುದು ಕಾನೂನುಬಾಹಿರ. ಈ ವಿಷ್ಯವನ್ನು ಅರಿತ ಯುನ್ ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಾಳೆ. ಅಧಿಕಾರಿಗಳು ಇದನ್ನು ಏಷ್ಯಾಟಿಕ್ ಕಪ್ಪು ಕರಡಿ ಎಂದು ಗುರುತಿಸಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಕರಡಿ 400 ಪೌಂಡ್ಗಳಿಗಿಂತ ಹೆಚ್ಚು ಅಂದ್ರೆ ಸುಮಾರು 182 ಕೆಜಿಗಿಂತ ಹೆಚ್ಚು ತೂಕವನ್ನು ಹೊಂದಿತ್ತಂತೆ. ಅದು ಒಂದು ಮೀಟರ್ ಉದ್ದವಿತ್ತು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಇದು ಕರಡಿ ಎಂಬುದು ತಿಳಿಯುತ್ತಿದ್ದಂತೆ ಕುಟುಂಬಸ್ಥರು ಭಯಭೀತರಾಗಿದ್ದರಂತೆ. ವನ್ಯಜೀವಿಗಳ ಆಶ್ರಯಕ್ಕೆ ಕರೆತರುವ ಮುನ್ನ ಕರಡಿಯನ್ನು ಮಲಗಿಸಿ ಕರೆತಂದಿದ್ದಾರೆ. ನಂತ್ರ ಕರಡಿಯನ್ನು ಯುನ್ನಾನ್ ವನ್ಯಜೀವಿ ಪಾರುಗಾಣಿಕಾ ಕೇಂದ್ರಕ್ಕೆ ಕರೆದೊಯ್ದಿದ್ದು, ವೀಕ್ಷಣೆ ನಡೆಯುತ್ತಿದೆ.
ಏಷ್ಯಾಟಿಕ್ ಕರಡಿ: ಗಂಡು ಏಷ್ಯಾಟಿಕ್ ಕರಡಿಯನ್ನು ಹಿಮಾಲಯ ಕರಡಿ ಎಂದೂ ಕರೆಯುತ್ತಾರೆ. ಇದು 400 ಪೌಂಡ್ ವರೆಗೆ ತೂಕ ಹೊಂದಿರುತ್ತದೆ. ಈ ವಿಲಕ್ಷಣ ಕಥೆಯನ್ನು ಮೊದಲು 2018 ರಲ್ಲಿ ದಿ ಇಂಡಿಪೆಂಡೆಂಟ್ ವರದಿ ಮಾಡಿತ್ತು. ಈಗ ಈ ಸುದ್ದಿ ಮತ್ತೆ ವೈರಲ್ ಆಗಿದೆ.
ಟಿಬೆಟಿಯನ್ ಮ್ಯಾಸ್ಟಿಫ್ ಏಷ್ಯನ್ ನಾಯಿ: ಟಿಬೆಟಿಯನ್ ಮ್ಯಾಸ್ಟಿಫ್ಗಳು ಏಷ್ಯನ್ ಕಪ್ಪು ಕರಡಿಯಂತೆಯೇ ಕಪ್ಪು-ಕಂದು ಬಣ್ಣವನ್ನು ಹೊಂದಿರುತ್ತವೆ. ಇದ್ರ ತೂಕವೂ 150 ಪೌಂಡ್ಗಳವರೆಗೆ ಅಂದ್ರೆ ಸುಮಾರು 69 ಕೆಜಿ ಇರುತ್ತದೆ