ರಾಮನಗರ: ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿದಲ್ಲಿರುವಾಗಲೇ ದಳಪತಿ ಹೆಚ್.ಡಿ.ದೇವೇಗೌಡ ಅವರಿಗೆ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದು, ಹಾಸನ ಕ್ಷೇತ್ರದಲ್ಲಂತೂ ಜೆಡಿಎಸ್ ಪಕ್ಷಕ್ಕೆ ವಿಘ್ನ ತಾಕಿದಂತಿದೆ. ಹೀಗಾಗಿ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬ ದೇವೇಗೌಡರ ಆರೋಗ್ಯ ವೃದ್ಧಿ ಹಾಗೂ ಪಕ್ಷ ಬಲವರ್ಧನೆಗಾಗಿ ಇಂದಿನಿಂದ 9 ದಿನಗಳ ಕಾಲ ಶತ ಚಂಡಿಕಾ ಯಾಗ ಹಾಗೂ ಕೋಟಿ ಮೃತ್ಯುಂಜಯ ಜಪ ಮಾಡುತ್ತಿದೆ. ರಾಮನಗರ ತಾಲೂಕಿನ ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ಶೃಂಗೇರಿಯ 25 ಪುರೋಹಿತರ ನೇತೃತ್ವದಲ್ಲಿ ಈ ಯಾಗ ನಡೆಯುತ್ತಿದ್ದು, ಮಾಜಿ ಸಿಎಂ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರು ಭಾಗಿಯಾಗಿದ್ದಾರೆ. ಪೂಜೆಗಾಗಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಕೂಡ ಆಗಮಿಸಿದ್ದು, ಕುಟುಂಬಸ್ಥರ ಹೊರತಾಗಿ ಇನ್ನಿತರರಿಗೆ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಇರುವುದಿಲ್ಲ.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ದೇವೇಗೌಡರ ಅನಾರೋಗ್ಯ ಹಾಗೂ ಟಿಕೆಟ್ ಗದ್ದಲ ಜೆಡಿಎಸ್ ಪಕ್ಷವನ್ನು ಕಾಡುತ್ತಿದೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು ಕಾಲು ನೋವಿನಿಂದ ಬಳಲುತ್ತಿದ್ದು, ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನೊಂದೆಡೆ, ಟಿಕೆಟ್ ಘೋಷಣೆಯಾಗದ ವಿವಿಧ ಕ್ಷೇತ್ರಗಳಲ್ಲಿ ಟಿಕೆಟ್ ಗೊಂದಲ ಹೆಚ್ಚಾಗಿದೆ. ಹಾಸನ ಕ್ಷೇತ್ರದಲ್ಲಂತೂ ದಳ ಕುಟುಂಬದೊಳಗೆ ಜಟಾಪಟಿ ಜೋರಾಗಿದೆ. ದೇವೇಗೌಡರ ಆರೋಗ್ಯ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ತಿಳಿಸಿದ್ದರು. ಅಲ್ಲದೆ, ಹಾಸನ ಕ್ಷೇತ್ರದ ಟಿಕೆಟ್ ಬಗ್ಗೆ ದೇವೇಗೌಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ ಎಂದೂ ಹೇಳಿದ್ದರು.
ಈ ಎಲ್ಲಾ ಬೆಳವಣಿಗೆಗಳ ನಡುವೆ ಕುಮಾರಸ್ವಾಮಿ ಕುಟುಂಬ ದೇವೇಗೌಡರ ಆರೋಗ್ಯ ವೃದ್ಧಿ ಹಾಗೂ ಪಕ್ಷದ ಬಲವರ್ಧನೆಗಾಗಿ ಶತ ಚಂಡಿಕಾ ಯಾಗಾ ಮತ್ತು ಕೋಟಿ ಮೃತ್ಯುಂಜಯ ಜಪ ನಡೆಸಲು ಮುಂದಾಗಿದ್ದು, ಇಂದಿನಿಂದ 9 ದಿನಗಳ ಕಾಲ ಈ ಪೂಜಾ ಕಾರ್ಯಕ್ರಮ ನಡೆಯಲಿದೆ. ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಇಂದು ಕುಟುಂಬಸ್ಥರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಮಾತ್ರ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದ್ದು, ಇತರರಿಗೆ ನಿರ್ಬಂಧ ಹೇರಲಾಗಿದೆ.
ಈ ಹಿಂದೆ ಕುಮಾರಸ್ವಾಮಿ ಅವರು ತಮ್ಮ 64ನೇ ಜನ್ಮ ದಿನದ ಪ್ರಯುಕ್ತ ರಾಮನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರಲ್ಲದೆ, ರಾಮನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿದ್ದರು. ಈ ಕಾರ್ಯಕ್ರಮದಲ್ಲಿ ತಿರುಮಲ ದೇವಸ್ಥಾನದಿಂದ 80 ಜನ ಅರ್ಚಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಪಾಲ್ಗೊಳ್ಳುವ ಅವಕಾಶ ನೀಡಲಾಗಿತ್ತು.