ಹುಬ್ಬಳ್ಳಿ: ಪ್ರಧಾನಿ ಮೋದಿ ಭೇಟಿಯಿಂದ ಕಾಂಗ್ರೆಸ್ ನಾಯಕರು ಭ್ರಮನಿರಸನಗೊಂಡಿದ್ದಾರೆ. ಮೋದಿ ಬಂದ ಮೇಲೆ ಸಿಗುತ್ತಿರುವ ಜನ ಬೆಂಬಲದಿಂದ ಅವರು ವಿಚಲಿತಗೊಂಡಿದ್ದಾರೆ. ಅನುಭವಿ ಮಾಜಿ ಸಿಎಂ ಒಬ್ಬರು ಈ ರೀತಿ ಮಾತನಾಡೋದು ಸರಿಯಲ್ಲ. ಹಾಗಾದರೆ ರಾಹುಲ್ ಗಾಂಧಿ ಕಾಂಗ್ರೆಸ್ ಏಜೆಂಟರಾ? ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.
ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಚುನಾವಣಾ ಏಜೆಂಟರಂತೆ ವರ್ತಿಸ್ತಾರೆ ಅಂತ ಸಿದ್ದರಾಮಯ್ಯ ಹೇಳಿಕೆಗೆ ಇಂದು(ಮಂಗಳವಾರ) ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ಕೊಟ್ಟಿದ್ದಾರೆ ಮಾಜಿ ಸಿಎಂ ಎಚ್.ಡಿ.ಕೆ. ರಾಜಕೀಯ ನಿವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಿಎಂ ಬೊಮ್ಮಾಯಿ, ಅವರು ಯಾವ ಸಂದರ್ಭದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಅವರದ್ದು ಇನ್ನೂ ನಿವೃತ್ತಿಯಾಗೋ ವಯಸ್ಸಲ್ಲ, ಇನ್ನೂ ಸೇವೆ ಮಾಡಬೇಕಿದೆ. ಚುನಾವಣೆ ಸಂದರ್ಭದಲ್ಲಿ ಇಂಥವೆಲ್ಲ ನಡೆಯುತ್ತಿರುತ್ತದೆ ಅಂತ ತಿಳಿಸಿದ್ದಾರೆ.
ಜನ ಪ್ರಬುದ್ಧರಾಗಿದ್ದು, ಎಲ್ಲವನ್ನೂ ಗಮನಿಸುತ್ತಾರೆ. ಚುನಾವಣೆಯಿಂದ ಚುನಾವಣೆಗೆ ಇನ್ನೂ ಪ್ರಬುದ್ಧರಾಗಿದ್ದಾರೆ. ನಾವು ಮಾತನಾಡುವಾಗ ಅದರ ಹಿಂದಿರುವ ಕಲ್ಪನೆಯೂ ಇರಬೇಕು. ಈಗಾಗಲೇ ಪಕ್ಷ ಬಲವರ್ಧನೆ ನಡೆಯುತ್ತಿದೆ. ಮೋದಿ, ಅಮಿತ್ ಶಾ ಸೇರಿದಂತೆ ಅನೇಕ ನಾಯಕರು ಮತ್ತೆ ಬರುತ್ತಾರೆ. ಪಕ್ಷದ ಬಲವರ್ಧನೆ ದೃಷ್ಟಿಯಿಂದ ಹಲವಾರು ನಾಯಕರು ರಾಜ್ಯಕ್ಕೆ ಬರುತ್ತಾರೆ. ದಾವಣಗೆರೆಯಲ್ಲಿ ಮಾರ್ಚ್‌ನಲ್ಲಿ ರಥಯಾತ್ರೆ ಆರಂಭಿಸಲಾಗುವುದು ಅಂತ ಹೇಳಿದ್ದಾರೆ.
ಬನವಾಸಿಯಲ್ಲಿ ಸಿಎಂ ಗೋ ಬ್ಯಾಕ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಿಎಂ ಬೊಮ್ಮಾಯಿ ಅವರು, ನಾಲ್ಕು ಮಂದಿ ಗೋ ಬ್ಯಾಕ್ ಅಂದರೆ ತಲೆಕೆಡಿಸಿಕೊಳ್ಳಲ್ಲ. ಗೋ ಬ್ಯಾಕ್ ಅಭಿಯಾನ ಮಾಮೂಲಿಯಾಗಿದೆ. ಯಡಿಯೂರಪ್ಪ ಜೈಲಿನಲ್ಲಿದ್ದಾಗ ಯಡಿಯೂರಪ್ಪ ಡೈರಿ ಬರೆದ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಮಗಳು ಡೈರಿ ಬಿಡುಗಡೆ ಮಾಡುವುದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಹಿರಿಯ ನಾಯಕರ ಕಾಲಿಗೆ ಬಿದ್ದಿದ್ದರೆ ನಾನೂ ಸಿಎಂ ಆಗುತ್ತಿದ್ದೆ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಇಂತಹ ಹೇಳಿಕೆಗೆ ನಾನು ಪ್ರತಿಕ್ರಿಯಿಸಲ್ಲ ಎಂದಷ್ಟೇ ತಿಳಿಸಿದ್ದಾರೆ.