ಕೂಗು ನಿಮ್ಮದು ಧ್ವನಿ ನಮ್ಮದು

ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ, ಆನ್ಲೈನ್ ರಮ್ಮಿ ಚಟಕ್ಕೆ ಬ್ಯಾಂಕಿನ ಎರಡು ಕೋಟಿ ಹಣ ದುರ್ಬಳಕೆ ICICI Bank ಮ್ಯಾನೇಜರ್ ಅರೆಸ್ಟ್

ಜೂಜಿನ ಚಟಕ್ಕೆ ಬಲಿಯಾದ ಜನರು ಹಾಳಾಗಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದೆ, ಆದ್ರೆ ಇಲ್ಲೊಬ್ಬ ಬ್ಯಾಂಕ್ ಅಧಿಕಾರಿ ಆನ್ಲೈನ್ ಜೂಜಿನ ಚಟಕ್ಕೆ ಬಿದ್ದು ಬ್ಯಾಂಕಿನಲ್ಲಿದ್ದ 2 ಕೋಟಿ ಅಧಿಕ ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದು, ಈಗ ಪೊಲೀಸರ ಅತಿಥಿ ಯಾಗಿದ್ದಾನೆ. ಬ್ಯಾಂಕ್ ಅಂದರೆ ನಂಬಿಕೆ, ಬ್ಯಾಂಕ್ ಅಧಿಕಾರಿಗಳೆಂದ್ರೆ ನಂಬಿಕೆಯ ಪ್ರತಿರೂಪ ಹಾಗಾಗಿ ಜನ ಬೆವರು ಸುರಿಸಿ ಕೂಡಿಟ್ಟ ಹಣ ಸೇಫ್ ಅಂತಾ ಬ್ಯಾಂಕಿನಲ್ಲಿ ಇಡ್ತಾರೆ. ಗ್ರಾಹಕರ ನಂಬಿಕೆ ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಹಿರಿಯ ಅಧಿಕಾರಿಗಳ ಮೇಲೆ ಇರುತ್ತೆ.

ಆದ್ರೆ ಐಸಿಐಸಿಐ ಬ್ಯಾಂಕ್ ಹಾವೇರಿ ಶಾಖೆಯ ಡೆಪ್ಯೂಟಿ ಮ್ಯಾನೇಜರ್ ವೀರೇಶ್ ಸಾಲಿಮಠ ಗ್ರಾಹಕರ ನಂಬಿಕೆ ಹುಸಿ ಮಾಡಿದ್ದಾರೆ. ಜೂಜಿನ ಆಟಕ್ಕೆ ಬಲಿಯಾಗಿದ್ದ ಈತ, ಅಧಿಕಾರ ದುರ್ಬಳಕೆ ಮಾಡಿಕೊಂಡು ಸುಮಾರು 2 ಕೋಟಿ 36 ಲಕ್ಷ ರೂಪಾಯಿ ಹಣವನ್ನ, ತನ್ನ ಸ್ವಂತ ಚಟಕ್ಕೆ ದುರ್ಬಳಕೆ ಮಾಡಿಕೊಂಡಿದ್ದಾನೆ.


ಡೆಪ್ಯೂಟಿ ಮ್ಯಾನೇಜರ್ ಆದವರಿಗೆ ಪ್ರತಿದಿನ ಸುಮಾರು 5 ಲಕ್ಷ ರೂಪಾಯಿ ಅಷ್ಟು ಬ್ಯಾಂಕ್ ಹಣವನ್ನ ಬೇರೆ ಬೇರೆ ಖಾತೆಗೆ ವರ್ಗಾಯಿಸಲು ಅವಕಾಶ ಇರುತ್ತದೆ. ಈ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಅಗಸ್ಟ್ ತಿಂಗಳಿನಿಂದ ಫೆಬ್ರವರಿ ವರಗೆ ತನ್ನ ಸ್ನೇಹಿತರ ಖಾತೆಗೆ ಹಣ ವರ್ಗಾಯಿಸಿ, ಆನ್ಲೈನ್ ರಮ್ಮಿ ಆಟದಲ್ಲಿ ಹೂಡಿಕೆ ಮಾಡುತ್ತಿದ್ದ. ಈ ವಿಚಾರ ಬ್ಯಾಂಕ್ ಮ್ಯಾನೇಜರ್ ಗೆ ಗೊತ್ತಾಗುತ್ತಿದ್ದಂತೆ ಹಾವೇರಿ ನಗರ ಠಾಣೆಗೆ ದೂರು ನೀಡಿದ್ದ ಬೆನ್ನಲ್ಲೇ ಪ್ರಕರಣ ಬಯಲಾಗಿದ್ದು ಆರೋಪಿ ವೀರೇಶ್ ಸಾಲಿಮಠನನನ್ನು ಬಂಧಿಸಲಾಗಿದೆ.

ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಯಾರೋ ಒಬ್ಬ ತನ್ನ ಚಟಕ್ಕೆ ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಹಕರಿಗೆ ಒಂದು ರೂಪಾಯಿ ಕೂಡಾ ಮೊಸ ಆಗಬಾರದು ಅಲ್ಲದೆ, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕೆಂದು ಒತ್ತಾಯಿಸಿದ್ದಾರೆ. ಒಟ್ಟಾರೆಯಾಗಿ ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ, ಆನ್ಲೈನ್ ಜೂಜಿನ ಚಟಕ್ಕೆ ಹಣವನ್ನ ದುರ್ಬಳಕೆ ಮಾಡಿಕೊಂಡಿರುವ ವೀರೇಶ್ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಈ ಕೇಸ್ ಗಾತ್ರ 2 ಕೋಟಿಗೂ ಅಧಿಕವಾಗಿರುವುದರಿಂದ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ಜೂಜಿನಲ್ಲಿ ಕಳೆದುಕೊಂಡ ಹಣವನ್ನ ಯಾವ ರೀತಿ ಹಿಂದಿರುಗಿಸ್ತಾನೆ ಎಂಬುದನ್ನ ಕಾದು ನೋಡಬೇಕಿದೆ.

error: Content is protected !!