ಕೂಗು ನಿಮ್ಮದು ಧ್ವನಿ ನಮ್ಮದು

ತುಂಬಾ ಹಲ್ಲು ನೋವಾ ಹಾಗಿದ್ರೆ ಈ ಮನೆಮದ್ದುಗಳನ್ನು ಟ್ರಾಯ್ ಮಾಡಿ ನೋಡಿ

ಬೆಳ್ಳುಳ್ಳಿಯನ್ನು ಆಹಾರವಾಗಿ ಮಾತ್ರವಲ್ಲದೆ ಔಷಧವಾಗಿಯೂ ಬಹಳ ಹಿಂದಿನಿಂದ ಬಳಸಲಾಗುತ್ತಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಲ್ಲು ನೋವು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುವುದರ ಜೊತೆಗೆ, ಇದು ನೋವು ನಿವಾರಕವಾಗಿಯೂ ಕಾರ್ಯ ನಿರ್ವಹಿಸುತ್ತದೆ.
ಹಲ್ಲುನೋವು ಸಾಮಾನ್ಯವಾಗಿ ಹಲ್ಲುಗಳಲ್ಲಿನ ಕುಳಿಗಳು ಅಥವಾ ವಸಡು ಕಾಯಿಲೆಯಿಂದ ಉಂಟಾಗುತ್ತದೆ. ನೀವು ಬಾಯಿಯ ಆರೋಗ್ಯದ ಬಗ್ಗೆ ಸರಿಯಾಗಿ ಗಮನ ಹರಿಸದಿದ್ದಲ್ಲಿ ನಿಮಗೆ ಹಲ್ಲುನೋವು ಕಟ್ಟಿಟ್ಟ ಬುತ್ತಿ. ಸರಿಯಾಗಿ ಹಲ್ಲು ಉಜ್ಜದಿದ್ದರೂ ಈ ಸಮಸ್ಯೆ ಬರುತ್ತದೆ.

ಆದರೆ ಹಲ್ಲು ನೋವು ಬಂದಾಗ ಎಷ್ಟು ಕಷ್ಟ ಎನ್ನುವುದು ಆ ನೋವು ಅನುಭವಿಸಿದವರಿಗೇ ಗೊತ್ತು. ಕೆಲವೊಮ್ಮೆ ಹಲ್ಲು ನೋವಿನಿಂದ ವಸಡು ಊದುತ್ತದೆ. ತಿನ್ನಲು , ಅಗಿಯಲು, ನುಂಗಲು ಸಾಧ್ಯವಾಗುವುದಿಲ್ಲ. ಗುಣಮುಖರಾಗುವರೆಗೂ ಲಿಕ್ವಿಡ್‌ ಫುಡ್‌ ಸೇವಿಸುತ್ತಾ ಕಾಲ ಕಳೆಯಬೇಕು. ಆದರೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಹಲ್ಲು ನೋವನ್ನು ಕಡಿಮೆ ಮಾಡಬಹುದು.

ಉಪ್ಪು ನೀರಿನಿಂದ ಗಾರ್ಗ್ಲ್ ಮಾಡುವುದು: ಹಲ್ಲುನೋವಿಗೆ ಮೊದಲ ಹಾಗೂ ಪರಿಣಾಮಕಾರಿ ಚಿಕಿತ್ಸೆ ಎಂದರೆ ಉಪ್ಪು ನೀರಿನಿಂದ ಬಾಯಿಯನ್ನು ತೊಳೆಯುವುದು. ಉಪ್ಪು ನೀರು ನೈಸರ್ಗಿಕ ಸೋಂಕು ನಿವಾರಕವಾಗಿದ್ದು ಅದು ನಿಮ್ಮ ಹಲ್ಲುಗಳ ನಡುವೆ ಅಂಟಿಕೊಂಡಿರುವ ಆಹಾರದ ಕಣಗಳು ಮತ್ತು ಕೊಳೆಯನ್ನು ತೆಗೆಯಲು ಸಹಾಯ ಮಾಡುತ್ತದೆ. ಇದಕ್ಕಾಗಿ ನಿಮಗೆ ತಡೆಯಲು ಸಾಧ್ಯವಾಗುವಷ್ಟು ಬಿಸಿ ನೀರನ್ನು ತೆಗೆದುಕೊಂಡು ಸ್ವಲ್ಪ ಉಪ್ಪು ಸೇರಿಸಿ ಮಿಕ್ಸ್‌ ಮಾಡಿ. ಬಾಯಿಗೆ ಈ ನೀರನ್ನು ಸೇರಿಸಿ ಸುತ್ತಲೂ ಮುಕ್ಕಳಿಸಿ. ದಿನಕ್ಕೆ 3-4 ಬಾರಿ ಹೀಗೆ ಮಾಡಿದರೆ ನೋವು ಕಡಿಮೆಯಾಗುತ್ತದೆ. ಇದು ಬಾಯಿ ಹುಣ್ಣಿನ ಸಮಸ್ಯೆಗೆ ಕೂಡಾ ಇದು ಬಹಳ ಒಳ್ಳೆಯದು.

ಹೈಡ್ರೋಜನ್ ಪೆರಾಕ್ಸೈಡ್ ಬಳಕೆ: ನೋವು ಮತ್ತು ಊತವನ್ನು ನಿವಾರಿಸಲು ಹೈಡ್ರೋಜನ್ ಪೆರಾಕ್ಸೈಡ್ ದ್ರಾವಣವನ್ನು ಕೂಡಾ ಬಳಸಬಹುದು. ಇದು ಬ್ಯಾಕ್ಟೀರಿಯಾವನ್ನು ಕೊಲ್ಲುವುದರ ಜೊತೆಗೆ ಒಸಡಿನ ರಕ್ತಸ್ರಾವವನ್ನು ಗುಣಪಡಿಸುತ್ತದೆ. ನೀರಿನೊಂದಿಗೆ ಸಮಾನ ಪ್ರಮಾಣದ ಹೈಡ್ರೋಜನ್ ಪೆರಾಕ್ಸೈಡ್ ಮಿಶ್ರಣ ಮಾಡಿ ಮತ್ತು ನಂತರ ಅದನ್ನು ಮೌತ್‌ ವಾಶ್‌ ಆಗಿ ಬಳಸಿ. ಆದರೆ ಈ ನೀರನ್ನು ನುಂಗಬೇಡಿ.

ಬೆಳ್ಳುಳ್ಳಿ: ಬೆಳ್ಳುಳ್ಳಿಯನ್ನು ಆಹಾರವಾಗಿ ಮಾತ್ರವಲ್ಲದೆ ಔಷಧವಾಗಿಯೂ ಬಹಳ ಹಿಂದಿನಿಂದ ಬಳಸಲಾಗುತ್ತಿದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹಲ್ಲು ನೋವು ಉಂಟುಮಾಡುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಪಡಿಸುವುದರ ಜೊತೆಗೆ, ಇದು ನೋವು ನಿವಾರಕವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಬೆಳ್ಳುಳ್ಳಿ ಎಸಳನ್ನು ನುಣ್ಣಗೆ ಅರೆದು ನೋವು ಇರುವ ಜಾಗಕ್ಕೆ ಹಚ್ಚಿ. ಇದರೊಂದಿಗೆ ಸ್ವಲ್ಪ ಉಪ್ಪನ್ನು ಕೂಡಾ ಮಿಕ್ಸ್‌ ಮಾಡಬಹುದು. ಅಥವಾ ಬೆಳ್ಳುಳ್ಳಿ ಎಸಳನ್ನು ಜಗಿಯುವುದರಿಂದ ಕೂಡಾ ನೋವಿನಿಂದ ಉಪಶಮನ ಪಡೆಯಬಹುದು.

ಲವಂಗ: ಹಲ್ಲುನೋವಿನ ಔಷಧಿಗಳ ತಯಾರಿಕೆಯಲ್ಲಿ ಲವಂಗವನ್ನು ಬಳಸಲಾಗುತ್ತದೆ. ಲವಂಗ ಎಣ್ಣೆ ಹಲ್ಲುನೋವನ್ನು ಪರಿಣಾಮಕಾರಿಯಾಗಿ ನಿವಾರಿಸುತ್ತದೆ. ಲವಂಗವು ಯುಜೆನಾಲ್ ಎಂಬ ಸಂಯುಕ್ತವನ್ನು ಹೊಂದಿದ್ದು ನೈಸರ್ಗಿಕ ನಂಜು ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಲವಂಗವನ್ನು ನೇರವಾಗಿ ಹಚ್ಚುವುದರಿಂದ ನಿಮಗೆ ಉರಿ ಎನಿಸಬಹುದು. ಅದಕ್ಕೆ ಸೂರ್ಯಕಾಂತಿ ಅಥವಾ ಜೊಜೊಬಾ ಎಣ್ಣೆ ಸೇರಿಸಿ. ಇದಕ್ಕೆ ಹತ್ತಿ ಉಂಡೆಯನ್ನು ಅದ್ದಿ ನೋವು ಇರುವ ಜಾಗಕ್ಕೆ ಹಚ್ಚಿ. ಅಥವಾ ಸ್ವಲ್ಪ ಬಿಸಿ ನೀರಿಗೆ ಕೆಲವು ಹನಿ ಲವಂಗ ಹನಿ ಸೇರಿಸಿ ಮೌತ್‌ ವಾಶ್‌ ಆಗಿ ಕೂಡಾ ಬಳಸಬಹುದು.

ಸೀಬೆ ಹಣ್ಣಿನ ಎಲೆಗಳು: ಸೀಬೆ ಹಣ್ಣಿನ ಎಲೆಗಳು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು ಗಾಯಗಳನ್ನು ಗುಣ ಪಡಿಸಲು ಸಹಾಯ ಮಾಡುತ್ತದೆ. ತಾಜಾ ಸೀಬೆ ಹಣ್ಣಿನ ಎಲೆಗಳನ್ನು ನೇರವಾಗಿ ಅಗಿಯಬಹುದು ಅಥವಾ ಎಲೆಗಳನ್ನು ಸಣ್ಣಗೆ ಕತ್ತರಿಸಿ ಕುದಿಯುವ ನೀರಿಗೆ ಬಳಸಿ ಅದು ಸ್ವಲ್ಪ ತಣ್ಣಗಾದಾಗ ಮೌತ್‌ ವಾಶ್‌ ಆಗಿ ಬಳಸಿದರೆ ನೋವು ನಿವಾರಣೆಯಾಗುತ್ತದೆ.

ಸಾಮಾನ್ಯ ಹಲ್ಲುನೋವಿಗೆ ಮೇಲೆ ತಿಳಿಸಿದ ಸಲಹೆಗಳು ಪರಿಣಾಮಕಾರಿಯಾಗಿದೆ. ಆದರೆ ನೀವು ತೀವ್ರವಾದ ಹಲ್ಲುನೋವಿನಿಂದ ಬಳಲುತ್ತಿದ್ದರೆ ಮತ್ತು ಈ ನೋವು ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ತಕ್ಷಣ ದಂತ ವೈದ್ಯರನ್ನು ಸಂಪರ್ಕಿಸಿ.

error: Content is protected !!