ಹುಬ್ಬಳ್ಳಿ : ಹೊಡಿ, ಬಡಿ, ಕಡಿ ಅನ್ನೋದು ಬಿಜೆಪಿ ಸಂಸ್ಕೃತಿ, ಮಹಾತ್ಮಾ ಗಾಂಧೀಜಿಯಂರವರನ್ನೇ ಕೊಂದವರು ಇವರು. ಆರ್ ಎಸ್ ಎಸ್ ನವರು ಇಂತವರ ಬಾಯಿಯಿಂದ ಹೇಳಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಅವರು ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಪ್ರಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರಿಗೆ ರಾಜ್ಯದಲ್ಲಿ ಚರ್ಚೆಯಾಗಬೇಕಿರುವುದು ಅಭಿವೃದ್ದಿ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ಧರಾಮಯ್ಯ, ರೈತರ, ಬಡವರ ದಲಿತರು ಅಲ್ಪಸಂಖ್ಯಾತರ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು. ಚುನಾವಣಾ ಪ್ರಣಾಳಿಕೆಯಲ್ಲಿ ಬೇಕಿದ್ದರೆ ಬರೆದುಕೊಳ್ಳಲಿ. ಈ ಚುನಾವಣೆ ಟಿಪ್ಪು ವರ್ಸಸ್ ಸಾವರ್ಕರ್ ನಡುವೆ ಚುನಾವಣೆ ಎಂದು ಬರೆದುಕೊಳ್ಳಲಿ. ಜನ ತೀರ್ಮಾನ ಮಾಡಲಿ. ಜನ ಇಂತಹದಕ್ಕೆಲ್ಲ ಪ್ರೋತ್ಸಾಹ ಕೊಡೋಕೆ ಆಗುತ್ತಾ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಮುಂದುವರೆದು ಮಾತನಾಡಿದ ಅವರು, ಸಿದ್ಧರಾಮಯ್ಯನನ್ನ ಮುಗಿಸಲಿ ಎಂದರೆ ಏನರ್ಥ? ಎಲ್ಲರೂ ಇದನ್ನ ಖಂಡಿಸಬೇಕು. ಒಬ್ಬ ಸಚಿವನಾಗಿ ಈ ರೀತಿ ಹೇಳಿಕೆ ಕೊಡೋದು ಎಷ್ಟರ ಮಟ್ಟಿಗೆ ಸರಿ. ಪ್ರಜೆಗಳಿಗೆ ರಕ್ಷಣೆ ಕೊಡೋದು ಸಚಿವರು ಹಾಗೂ ಸರ್ಕಾರದ ಜವಾಬ್ದಾರಿ. ಟಿಪ್ಪುವನ್ನ ಮುಗಿಸಿದ ಹಾಗೆ ಸಿದ್ಧರಾಮಯ್ಯನನ್ನ ಮುಗಿಸಿ ಎಂದರೆ ಏನರ್ಥ? ಪೊಲೀಸರು ಇದನ್ನ ಸುಮೋಟೋ ಪ್ರಕರಣವಾಗಿ ದಾಖಲಿಸಿಕೊಳ್ಳಬೇಕು. ಪ್ರಧಾನಿ, ಅಮೀತ್ ಶಾ ಹೇಳಲಿ ಇದು ಸರೀನಾ ಅಂತಾ. ಸಿದ್ಧರಾಮಯ್ಯನನ್ನ ರಕ್ಷಿಸಬೇಕಾದವರೇ ಮುಗಿಸಿ ಅಂತಾ ಕರೆ ಕೊಟ್ಟರೆ ಏನರ್ಥ? ನಾನು ದೂರು ಕೊಡೋಕೆ ಹೋಗಲ್ಲ ಎಂದು ಸಿಡಿಮಿಡಿಗೊಂಡಿದ್ದಾರೆ.