ಬೆಂಗಳೂರು : ಕನ್ನಡದ ಮನೆ ಮಾತಾಗಿರುವ ಧಾರವಾಹಿ ಭಾಗ್ಯಲಕ್ಷ್ಮೀ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಇನ್ನೇನು 100 ಸಂಚಿಕೆ ಪೂರೈಸುವ ಸಂಭ್ರಮದಲ್ಲಿರುವ ಧಾರವಾಹಿ ತಂಡಕ್ಕೆ ಮತ್ತೊಂದು ಸಂತಸ. ಹೌದು ಈ ಧಾರಾವಾಹಿ ಹಿಂದಿ ಭಾಷೆಗೂ ಡಬ್ ಆಗುತ್ತಿದ್ದು, ಸದ್ಯದಲ್ಲೇ ಹಿಂದಿ ಭಾಷೆಯಲ್ಲಿ ಪ್ರಸಾರ ಆರಂಭವಾಗಲಿದೆ.
ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಟಿಆರ್ ಪಿ ರೇಸ್ ನಲ್ಲೂ ಮುಂದಿರುವ ಭಾಗ್ಯಲಕ್ಷ್ಮೀ ಧಾರವಾಹಿ ಇನ್ನು ಮುಂದೆ ಹಿಂದಿಯಲ್ಲಿಯೂ ಪ್ರಸಾರವಾಗಲಿದೆ. ಸದ್ಯದಲ್ಲೇ ಹಿಂದಿಯ ವಾಹಿನಿಯೊಂದರಲ್ಲಿ ಈ ಧಾರಾವಾಹಿಯ ಹಿಂದಿ ವರ್ಸನ್ ಪ್ರಸಾರವಾಗಲಿದೆ. ಕೆಲವೇ ತಿಂಗಳುಗಳ ಹಿಂದೆ ಆರಂಭವಾದ ಈ ಧಾರವಾಹಿ ಅಪಾರ ಅಭಿಮಾನಿ ಬಳಗವನ್ನು ಗಳಿಸಿದೆ. ಬಡ ಮನೆಯಲ್ಲಿ ಹುಟ್ಟಿದ ಅಕ್ಕ ತಂಗಿ, ಅವರ ಪ್ರೀತಿ, ತನ್ನ ತಂಗಿಗೆ ಶ್ರೀರಾಮನಥಹ ವರ ಬೇಕು ಎಂದು ಎನ್ನುವ ಅಕ್ಕನ ಕಾಳಜಿ, ಅಕ್ಕನ ಮಾತು ತಪ್ಪ ತಂಗಿ ಈ ಎಲ್ಲಾ ಅಂಶಗಳು ಧಾರಾವಾಹಿಯಲ್ಲಿ ಮೇಳೈಸುತ್ತಿದೆ.
ದೊಡ್ಡ ತಾರಾಬಳಗವನ್ನೇ ಹೊಂದಿರುವ ಈ ಧಾರಾವಾಹಿಯಲ್ಲಿ ಭಾಗ್ಯ ಆಗಿ ಸುಷ್ಮಾ ಕೆ ರಾವ್, ಲಕ್ಷ್ಮೀ ಆಗಿ ಭೂಮಿಕಾ ರಮೇಶ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಸುದರ್ಶನ್ ರಂಗಪ್ರಸಾದ್, ಶಮಂತ್ ಬ್ರೋ ಗೌಡ, ಪದ್ಮಜಾ ರಾವ್, ಸುಷ್ಮಾ ನಾಣಯ್ಯ ಅಭಿನಯಿಸುತ್ತಿದ್ದಾರೆ. ಈ ಧಾರಾವಾಹಿಗೆ ಯಶವಂತ್ ಪಾಂಡು ನಿರ್ದೇಶನವಿದೆ.