ಕಲಬುರಗಿ: ಆಳಂದ ಪಟ್ಟಣದಲ್ಲಿರುವ ಸುಪ್ರಸಿದ್ದ ಲಾಡ್ಲೇ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೆ ಕೋರ್ಟ್ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಇಂದು ಪಟ್ಟಣಕ್ಕೆ ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಭೇಟಿ ನೀಡಿದ್ದು, ಭದ್ರತೆ ಪರಿಶೀಲಿಸಲಿದ್ದಾರೆ. ಜತೆಗೆ, ಪೊಲೀಸರು ಪಥ ಸಂಚಲನವನ್ನೂ ನಡೆಸಲಿದ್ದಾರೆ. ದರ್ಗಾದಲ್ಲಿರೋ ರಾಘವ ಚೈತನ್ಯ ಶಿವಲಿಂಗಕ್ಕೆ ಶಿವರಾತ್ರಿ ಹಬ್ಬದ ದಿನ ಪೂಜೆ ಸಲ್ಲಿಸಲಾಗುತ್ತದೆ. ಅದೇ ದಿನ ದರ್ಗಾದಲ್ಲಿ ಉರೂಸ್ ಕೂಡ ಇರುವುದು ಕುತೂಹಲಕ್ಕೆ ಕಾರಣವಾಗಿದೆ.
ಕಳೆದ ವರ್ಷ ಶಿವರಾತ್ರಿಯಂದು ಪೂಜೆ ಸಮಯದಲ್ಲಿ ದೊಡ್ಡ ಮಟ್ಟದ ಘರ್ಷಣೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಳ್ಳುತ್ತಿದ್ದಾರೆ. ಖುದ್ದು ಎಡಿಜಿಪಿ ಅಲೋಕ್ ಕುಮಾರ್ ಅವರೇ ಭದ್ರತೆ ಪರಿಶೀಲಿಸಲಿದ್ದಾರೆ.
ಶಿವತರಾತ್ರಿಯಂದು ಪೂಜೆಗೆ ಅನುಮತಿ ದೊರೆತ ಕಾರಣ ಹಿಂದೂ ಸಂಘಟನೆಗಳ ಮುಖಂಡರು ಈಗಾಗಲೇ ಶಿವಮಾಲೆ ಅಭಿಯಾನವನ್ನು ಆರಂಭಿಸಿದ್ದಾರೆ. ಕಲಬುರಗಿ ನಗರದ ರಾಮಮಂದಿರದಲ್ಲಿ ಹೋಮ, ಹವನ ಮತ್ತು ಶಿವಮಾಲೆಯನ್ನು ಧರಿಸುವ ಪ್ರಕ್ರಿಯೆ ಚುರುಕುಗೊಂಡಿದೆ.
ಕಳೆದ ವರ್ಷ ನಡೆದಿತ್ತು ಭಾರೀ ಗಲಭೆ
ಶಿವಲಿಂಗವನ್ನು ಶುದ್ಧೀಕರೀಸುತ್ತೇವೆ ಅಂತ ಹಿಂದೂ ಸಂಘಟನೆಗಳು 2022 ರ ಶಿವರಾತ್ರಿ ದಿನ ಪೂಜೆಗೆ ಮುಂದಾಗಿದ್ದರು. ಆದರೆ, ದರ್ಗಾದೊಳಗೆ ಪೂಜೆಗೆ ಮುಸ್ಲಿಂ ಸಮಾಜದವರು ವಿರೋಧಿಸಿದ್ದರು. ಕೊನೆಗೆ ಜಿಲ್ಲಾಡಳಿತ ಸಂಧಾನ ನಡೆಸಿ, ಕೆಲವೇ ಕೆಲವು ಜನರಿಗೆ ಪೂಜೆಗೆ ಅವಕಾಶ ನೀಡಿತ್ತು. ಆದರೆ ಪೂಜೆಗೆ ಹೋಗಿದ್ದ ಕೇಂದ್ರ ಸಚಿವ ಭಗವಂತ ಖೂಬಾ ಸೇರಿದಂತೆ ಸ್ವಾಮೀಜಿಗಳು, ಜನಪ್ರತಿನಿಧಿಗಳು ಇದ್ದ ಕಾರುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು. ದರ್ಗಾದ ಹೊರ ವಾತಾವರಣದಲ್ಲಿ ದೊಡ್ಡ ಮಟ್ಟದ ಘರ್ಷಣೆ ಉಂಟಾಗಿತ್ತು.