ಬೆಂಗಳೂರು: ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಂದ ತೌಡು ಕುಟ್ಟಿದ ಭಾಷಣ ಮಾಡಿಸಿದ್ದಾರೆ. ಸರ್ಕಾರದ ಆಡಳಿತದ ಹಿನ್ನೋಟ ಹಾಗೂ ಮುನ್ನೋಟ ಇರಬೇಕಿದ್ದ ಭಾಷಣದಲ್ಲಿ ಹಿನ್ನೋಟ ಸುಳ್ಳುಗಳಿಂದ ಕೂಡಿದ್ದರೆ, ಮುನ್ನೋಟ ಇರಲೇ ಇಲ್ಲ. ರಾಜ್ಯಪಾಲರ ಭಾಷಣದ ಮೂಲಕ ಭತ್ತ ಕುಟ್ಟಿದರೆ ಅಕ್ಕಿ ಆದರೂ ಬರುತ್ತಿತ್ತು, ತೌಡು ಕುಟ್ಟಿದರೆ ಏನು ಫಲ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಮಂಗಳವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಬಿಜೆಪಿಯು ಪ್ರಣಾಳಿಕೆಯಲ್ಲಿ ನೀಡಿದ್ದ ಯಾವ ಭರವಸೆಯನ್ನೂ ಈಡೇರಿಸಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇಷ್ಟಾದರೂ ಯಾವುದೇ ವಿಚಾರವನ್ನು ಸರ್ಕಾರ ರಾಜ್ಯಪಾಲರ ಭಾಷಣದ ಮೂಲಕ ಹೇಳಿಸಿಲ್ಲ ಎಂದು ಟೀಕಿಸಿದರು.
ಫೆಬ್ರುವರಿ 10 ರಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು 82 ಪ್ಯಾರಾಗಳ ಭಾಷಣ ಮಾಡಿದ್ದಾರೆ. ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಕೆಟ್ಟಭಾಷಣ ಕೇಳಿರಲಿಲ್ಲ. ಕಳೆದ 4 ವರ್ಷದ ಸರ್ಕಾರ ಸಾಧನೆ, ವೈಫಲ್ಯಗಳ ಬಗ್ಗೆ ಹೇಳಬೇಕಿತ್ತು. ಪ್ರಣಾಳಿಕೆಯಲ್ಲಿ ನೀಡಿದ್ದ 600 ಭರವಸೆಗಳಲ್ಲಿ 50ನ್ನೂ ಈಡೇರಿಸಿಲ್ಲ. ಹೀಗಿದ್ದರೂ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರ ಬಡವರ, ರೈತರ, ಅವಕಾಶ ವಂಚಿತರ ಧ್ವನಿಯಾಗಿ ಕೆಲಸ ಮಾಡಿದೆ ಎಂದು ಹೇಳಿಸಲಾಗಿದೆ. ಇದು ಶುದ್ಧ ಸುಳ್ಳುಗಳ ಭಾಷಣ ಎಂದು ಹೇಳಿದರು.
ಉದ್ಯಮಿಗಳ ಸಾಲ ಮನ್ನಾ ದೇಶಕ್ಕೆ ಲಾಭವೇ?
ಅಡಿಕೆ ಬೆಲೆ ಕುಸಿದಿದೆ, ಹತ್ತಿ ರಫ್ತು ನಿಷೇಧಿಸಲಾಗಿದೆ, ಬೆಳೆಗಳಿಗೆ ಅಂಟಿರುವ ರೋಗಗಳಿಂದ ಇಳುವರಿ ಕಡಿಮೆಯಾಗಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಹೀಗಿದ್ದರೂ ಸಾಲ ಮನ್ನಾ ಮಾಡುತ್ತಿಲ್ಲ.
ಹಿಂದೆ ವಿ.ಎಸ್. ಉಗ್ರಪ್ಪನವರು ಯಡಿಯೂರಪ್ಪನವರನ್ನು ಬರಗಾಲ ಇದೆ, ರೈತರ ಸಾಲ ಮನ್ನಾ ಮಾಡಿ ಎಂದರೆ ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಎಂದಿದ್ದರು. ಇದೀಗ ಸಂಸದ ತೇಜಸ್ವಿ ಸೂರ್ಯ ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ನಷ್ಟಎಂದಿದ್ದಾರೆ. ಹಾಗಾದರೆ ಉದ್ಯಮಿಗಳು, ಬಂಡವಾಳಶಾಹಿಗಳ 12 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದ್ದಾರಲ್ಲ ಇದು ದೇಶಕ್ಕೆ ಲಾಭವೇ ರೈತರ ಬಗ್ಗೆ ಯಾಕಿಷ್ಟು ನಿರ್ಲಕ್ಷ್ಯ ಧೋರಣೆ ಎಂದು ಪ್ರಶ್ನಿಸಿದರು.
ವಿವಾದ ರಹಿತ ರಾಜ್ಯಪಾಲರಿಗೆ ಸಿದ್ದು ಅಭಿನಂದನೆ
ರಾಜ್ಯದ ಅಕ್ಕ-ಪಕ್ಕದ ರಾಜ್ಯಗಳಲ್ಲಿನ ರಾಜಭವನಗಳು ವಿವಾದದ ಕೇಂದ್ರಗಳಾಗಿವೆ. ಆದರೆ ಕರ್ನಾಟಕದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಅಂತಹ ಯಾವುದೇ ವಿವಾದದ ಸುಳಿಗೆ ಸಿಲುಕದೆ ರಾಜಭವನದ ಗೌರವ, ಘನತೆ ಕಾಪಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.