ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ್ತು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಧ್ಯೆ ರಾಜಕೀಯ ಗುದ್ದಾಟ ಮುಂದುವರೆದಿದೆ. ಇಂದು ಬೆಳಗಾವಿ ಗ್ರಾಮೀಣ ಬಿಜೆಪಿ ಘಟಕ ಕಚೇರಿ ಉದ್ಘಾಟನೆ ಮಾಡುವ ಮೂಲಕ ಪಕ್ಷ ಸಂಘಟನೆಗೆ ಸಚಿವ ರಮೇಶ್ ಜಾರಕಿಹೊಳಿ ಚಾಲನೆ ನೀಡಿದ್ರು. ಬಿಜೆಪಿ ಕಚೇರಿ ಉದ್ಘಾಟನೆಗೆ ಸಚಿವ ರಮೇಶ ಜಾರಕಿಹೊಳಿ, ಕೇಂದ್ರ ಸಚಿವ ಸುರೇಶ ಅಂಗಡಿ, ಎಂಪಿ ಈರಣ್ಣ ಕಡಾಡಿ ಸೇರಿ ಘಟಾನುಘಟಿ ಕೇಸರಿ ನಾಯಕರು ಸಾಕ್ಷಿಯಾದ್ರು. ಇದೆ ಸಂದರ್ಭದಲ್ಲಿ ಮಾತನಾಡಿದ ಸಾಹುಕಾರ ರಮೇಶ ಜಾರಕಿಹೊಳಿ ಕಳೆದ ಚುನಾವಣೆಯಲ್ಲಿ ಕೊಟ್ಟ ಕುಕ್ಕರ್ ಇನ್ನೂ ಚೆನ್ನಾಗಿದೆಯಾ..? ಕಳೆದ ಚುನಾವಣೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ನಾನು ಪ್ರಯತ್ನ ಮಾಡಿದ್ದೆ. ನನ್ನಿಂದ ಮಾಜಿ ಶಾಸಕ ಸಂಜಯ ಪಾಟೀಲ್ ಗೆ ಅನ್ಯಾಯ ಆಗಿದೆ ಎಂದರು. ಬಿಜೆಪಿ ಕಾರ್ಯಕರ್ತರು ಸ್ವತಃ ಹಣದಿಂದ ಕಾರ್ಯಾಲಯ ಮಾಡಿದ್ದಾರೆ. ಗ್ರಾಮೀಣ ಕ್ಷೇತ್ರದಲ್ಲಿ 2023 ರಲ್ಲಿ ಇತಿಹಾಸ ಸೃಷ್ಟಿ ಮಾಡಬೇಕಿದೆ. ರಮೇಶ ಜಾರಕಿಹೊಳಿ, ಸುರೇಶ ಅಂಗಡಿಯಿಂದ ಇದು ಸಾಧ್ಯವಿಲ್ಲ. ಕಾರ್ಯಕರ್ತರು ಇದಕ್ಕಾಗಿ ಸಿದ್ಧರಾಗಬೇಕು. ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡೋ ಶಕ್ತಿ ಕಾರ್ಯಕರ್ತರಿಗೆ ಇದೆ ಎಂದು ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕಿಡಿಕಾರಿದ್ರು.
ಇನ್ನು ಗ್ರಾಮೀಣ ಭಾಗದ ಶಾಸಕರಿಗೆ ಹಣದ ಅಹಂಕಾರ ಇದೆ. ಕುಕ್ಕರ್ ಕೊಟ್ಟಿದ್ದು ನನ್ನ ದುಡ್ಡಿನಿಂದ. ಇದೀಗ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಆಗಿದೆ. ಈ ಕ್ಷೇತ್ರದದಲ್ಲಿ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧ. ಯಾವುದೇ ಆಮಿಷಕ್ಕೆ ಬಲಿಯಾಗಬೇಡಿ ಎಂದ ಸಚಿವ ರಮೇಶ್ ಜಾರಕಿಹೊಳಿ, 2023 ರಲ್ಲಿ ಗ್ರಾಮೀಣದಲ್ಲಿ ಬಿಜೆಪಿ ಧ್ವಜ ಹಾರಿಸಲೇಬೇಕು. ಡಿಸಿಸಿ ಬ್ಯಾಂಕ್, ಜಿಪಂ ಸೇರಿ ಚುನಾವಣೆಯಲ್ಲಿ ಗೆಲ್ಲಬೇಕು. ಅವರು ಎಷ್ಟು ದುಡ್ಡು ಕೊಡುತ್ತಾರೆ ಅದಕ್ಕಿಂತ ಹೆಚ್ಚು ನಾನು ಕೊಡುತ್ತೇನೆ. ನಮ್ಮದು ಬೆವರು ಸುರಿಸಿ ದುಡಿದ ದುಡ್ಡು. ಅವರ ಹಾಗೇ ಹಾರಮಿ ಬಂದ ದುಡ್ಡಲ್ಲ. ಇದು ಅಹಂಕಾರದ ಮಾತಲ್ಲ, ಸಾಲ ಮಾಡಿಯಾದ್ರು ಕೊಡುತ್ತೇನೆ ಎಂದು ಪರೋಕ್ಷವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಸಚಿವ ಜಾರಕಿಹೊಳಿ ಟಾಂಗ್ ಕೊಟ್ಟರು. ಒಟ್ಟಿನಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮತ ಕ್ಷೇತ್ರದಲ್ಲಿ ಮತ್ತೆ ಬಿಜೆಪಿ ಗಟ್ಟಿಗೊಳಿಸಲು ಸಚಿವ ರಮೇಶ ಜಾರಕಿಹೊಳಿ ರಣತಂತ್ರ ರೂಪಿಸಿದ್ದಾರೆ. 2023 ರಲ್ಲಿ ಬಿಜೆಪಿ ಅಭ್ಯರ್ಥಿ ಯಾರೆಂದು ಪಕ್ಷದ ಹೈಕಮಾಂಡ ತೀರ್ಮಾನ ಮಾಡಲಿದ್ದಾರೆ ಎಂದು ಹೇಳುವ ಮೂಲಕ ಸಚಿವ ರಮೇಶ ಜಾರಕಿಹೊಳಿ ಟಿಕೆಟ್ ಆಕಾಂಕ್ಷಿತರಿಗೆ ಪಕ್ಷ ಸಂಘಟನೆಗೆ ಕೆಲಸ ಮಾಡುವಂತೆ ಸಲಹೆ ನೀಡಿದ್ದಾರೆ.