ಕೂಗು ನಿಮ್ಮದು ಧ್ವನಿ ನಮ್ಮದು

ಬಜೆಟ್ ವಿರೋಧಿಸುವ ಏಕೈಕ ಉದ್ದೇಶದಿಂದ ಸಿದ್ದರಾಮಯ್ಯ ವಿರೋಧದ ಮಾತಾಡಿದ್ದಾರೆ, ಕರ್ನಾಟಕ ಸಂಸ್ಕೃತಿಗೆ ತಕ್ಕಂತೆ ಮಾತನಾಡಲಿ, ಪ್ರಲ್ಹಾದ್ ಜೋಶಿ ವಾಗ್ದಾಳಿ

ನವದೆಹಲಿ: ವಿರೋಧ ಪಕ್ಷವಾಗಿ ಎಲ್ಲವನ್ನು ವಿರೋಧಿಸಬೇಕು ಅನ್ನೋದನ್ನ ವಿಪಕ್ಷಗಳು ಪಾಲಿಸಿ ಮಾಡಿಕೊಂಡಿವೆ. ಆದರೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿರೋಧಿಸುವ ಭರದಲ್ಲಿ ತಮ್ಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. ದೆಹಲಿಯಲ್ಲಿಂದು ಬಜೆಟ್ ಮಂಡನೆ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಜೆಟ್ ಚೆನ್ನಾಗಿದ್ದರೂ ಸಹ ವಿರೋಧಿಸಬೇಕು ಅಂತಾ ಸಿದ್ದರಾಮಯ್ಯ ವಿರೋಧಿಸಿದ್ದಾರೆ ಎಂದರು‌.

ಕರ್ನಾಟಕ ಸಂಸ್ಕೃತಿಯನ್ನ ಅರಿತು ಸಿದ್ದರಾಮಯ್ಯ ಅವರು ಮಾತನಾಡಲಿ. ಮೊನ್ನೆಯಷ್ಟೇ ರಾಜ್ಯದ ಮುಖ್ಯಮಂತ್ರಿಗಳಿಗೆ ಸಿದ್ದರಾಮಯ್ಯ ಅವರು ನಾಯಿ ಎಂಬ ಪದ ಬಳಸಿದ್ದರು. ಇದು ಕರ್ನಾಟಕ ನಾಯಕರ ಸಂಸ್ಕೃತಿಗೆ ತಕ್ಕದ್ದಲ್ಲ. ವಿಪಕ್ಷ ನಾಯಕರಾಗಿ ಹೇಗೆ ಬೇಕೋ ಹಾಗೆ ನಾಲಿಗೆ ಹರಿಬಿಡೋದು ಸರಿಯಲ್ಲ ಎಂದ ಸಚಿವ ಜೋಶಿ ಅವರು ಕ್ಷೇತ್ರ ಸಿಕ್ಕಿಲ್ಲ ಅಂತಾ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾತಾಡುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ನಲ್ಲಿ ರಾಹುಲ್ ಗಾಂಧಿ ನಾಯಕತ್ವದಿಂದ ರೋಸಿ ಹೋಗಿ ಹೀಗೆ ಮಾತನಾಡುತ್ತಿರಬಹುದು ಎಂದು ಪ್ರಲ್ಹಾದ್ ಜೋಶಿ ಲೇವಡಿ ಮಾಡಿದರು.

ಭದ್ರಾ ಮೇಲ್ದಂಡೆ ಯೋಜನೆ ವಿಚಾರವಾಗಿ ರಾಜ್ಯ ಸರ್ಕಾರ 8 ಸಾವಿರ ಕೋಟಿ ರೂ ಅನುದಾನಕ್ಕೆ ಪ್ತಸ್ತಾವನೆ ಸಲ್ಲಿಸಿತ್ತು. ಕೇಂದ್ರ ಸರ್ಕಾರ 5300 ಕೋಟಿ ಅನುದಾನ ಒದಗಿಸಿದೆ. ಸಿದ್ದರಾಮಯ್ಯ ಅವರು ಈ ಬಗ್ಗೆಯೂ ಕೊಂಕು ಮಾತಾಡಿದ್ದಾರೆ. ಆದ್ರೆ ಅವರ ಕಾಲದಲ್ಲಿ ಏನು ಸಿಕ್ಕಿತ್ತು? ಅವರ ಕಾಲದಲ್ಲಿ ಎಷ್ಟು ಭ್ರಷ್ಟಾಚಾರ ಆಗಿತ್ತು ಅನ್ನೋದು ಜನರಿಗೆ ಗೊತ್ತಿದೆ ಎಂದು ಅವರು ತಿರುಗೇಟು ನೀಡಿದರು.

ಕಾಂಗ್ರೆಸ್ ಇದ್ದಾಗ ಕರ್ನಾಟಕ ರಾಜ್ಯದ ರೈಲ್ವೇಗೆ 600 ರಿಂದ 800 ಕೋಟಿ ರೂ ಮಾತ್ರ ಸಿಗ್ತಿತ್ತು. ಆದ್ರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಪ್ರತಿ ಬಜೆಟ್ ನಲ್ಲಿ ಮೂರುವರೆ-ನಾಲ್ಕು ಸಾವಿರ ಕೋಟಿ ಅನುದಾನ ಒದಗಿಸಲಾಗ್ತಿದೆ. ಕಳೆದ ಬಾರಿ 3900 ಕೋಟಿ ಒದಗಿಸಲಾಗಿತ್ತು. ಈ ಬಾರಿ ಒಟ್ಟಾರೆ ರೈಲ್ವೇಗೆ 2 ಲಕ್ಷದ 40 ಸಾವಿರ ಕೋಟಿ ಅನುದಾನ ಒದಗಿಸಲಾಗಿದೆ. ಇದು 2013-14 ಕ್ಕೆ ಹೊಲಿಸಿದರೆ 9 ಪಟ್ಟು ಹೆಚ್ಚಿದೆ. ಕರ್ನಾಟಕಕ್ಕೂ ಇದರ ಲಾಭ ದೊರೆಯಲಿದೆ ಎಂದು ಪ್ರಲ್ಹಾದ್ ಜೋಶಿ ಹೇಳಿದರು.

ದೇಶದಲ್ಲಿ ಎಲ್ಲರಿಗೂ ವಸತಿ ಕಲ್ಪಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ 48,000 ಕೋಟಿಯಿಂದ ಈ ಬಾರಿಯ ಬಜೆಟ್‌ನಲ್ಲಿ ರೂ. 79,000 ಕೋಟಿ ಘೋಷಿಸುವ ಮೂಲಕ ಜನಸಾಮಾನ್ಯರ ಪರವಾಗಿ ಬಜೆಟ್ ಮಂಡನೆ ಮಾಡಿದೆ.

ಸಣ್ಣ ಮತ್ತು ಮಧ್ಯಮ ಸ್ಥರದ ಉದ್ಯಮಗಳಿಗೆ ಉತ್ತೇಜನ ನೀಡಲಾಗಿದೆ. ಸಂಭಾವ್ಯ ತೆರಿಗೆಯ ಮಿತಿಯನ್ನು ವಿಸ್ತರಿಸಿದೆ. ಮಧ್ಯಮ ವರ್ಗದವರಿಗೆ ಟ್ಯಾಕ್ಸ್ ರಿಲೀಫ್ ನೀಡಿದೆ.

ದೇಶದ ಆರ್ಥಿಕ ಪ್ರಗತಿಗೆ ಬಜೆಟ್ ನಲ್ಲಿ ಒತ್ತು ನೀಡಿದ್ದಲ್ಲದೆ, ದೇಶದ ಆರ್ಥಿಕ ಪ್ರಗತಿ ಬಡ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹೆಚ್ವಿನ ಗಮನ ಹರಿಸಿ ನಿರ್ಮಲಾ ಸೀತಾರಾಮನ್ ಅವರು ಈ ಬಜೆಟ್ ಅಚ್ಚುಕಟ್ಟಾಗಿ ರೂಪಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

error: Content is protected !!