ಕೂಗು ನಿಮ್ಮದು ಧ್ವನಿ ನಮ್ಮದು

ನಾಳೆ ಅಂಗನವಾಡಿ ನೌಕರರಿಂದ ಮುಖ್ಯಮಂತ್ರಿ ನಿವಾಸ ಚಲೋ; ಇನ್ನೊಂದಡೆ ಪೌರಕಾರ್ಮಿಕರ ಮುಷ್ಕರ!

ಬೆಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 8 ದಿನದಿಂದ ಫ್ರೀಡಂ ಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಫೆ.1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸ ಚಲೋ ಕೈಗೊಳ್ಳಲಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ಸ್ಥಳದಲ್ಲೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಐಟಿಯು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್‌.ವರಲಕ್ಷ್ಮಿ, ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ 10 ದಿನ ಗಡುವು ನೀಡಿದ್ದೆವು.

ಆದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಾರ್ಯಕರ್ತೆಯರ ಸಮಸ್ಯೆಗಳನ್ನು ಪರಿಹರಿಸಲು ಸಮಯಾವಕಾಶ ಸಿಕ್ಕಿಲ್ಲ. ಆದ್ದರಿಂದ ಬುಧವಾರ ಮುಖ್ಯಮಂತ್ರಿ ನಿವಾಸ ಚಲೋ ಕೈಗೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಬೇಡಿಕೆಗಳ ಬಗ್ಗೆ ಚರ್ಚಿಸಲು ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್‌ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ‘ಇಲಾಖೆ ಮಟ್ಟದಲ್ಲಿ ಆಗುವ ಕಾರ್ಯವನ್ನು ಮಾಡಲಾಗುವುದು. ಉಳಿದ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು’ ಎಂದು ಭರವಸೆ ಸಚಿವರು ನೀಡಿದರು. ಆದರೆ ಇಲ್ಲಿಯವರೆಗೂ ಯಾವುದೇ ಸರ್ಕಾರಿ ಆದೇಶ ಹೊರಬೀಳದ ಹಿನ್ನೆಲೆಯಲ್ಲಿ ಹೋರಾಟ ಮುಂದುವರೆಸಲಾಗಿದೆ ಎಂದು ವಿವರಿಸಿದರು.

ನಾಳೆಯಿಂದ ರಾಜ್ಯಾದ್ಯಂತ ಪೌರಕಾರ್ಮಿಕರ ಮುಷ್ಕರ

ಬೆಂಗಳೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿರುವ ತ್ಯಾಜ್ಯ ವಿಲೇವಾರಿ ವಾಹನ ಚಾಲಕರು ಹಾಗೂ ನೀರು ಸರಬರಾಜು ಸಹಾಯಕರು ಉದ್ಯೋಗ ಕಾಯಮಾತಿಗೆ ಒತ್ತಾಯಿಸಿ ಫೆ.1ರಿಂದ ಕೆಲಸ ಸ್ಥಗಿತಗೊಳಿಸಿ ಜಿಲ್ಲಾಧಿಕಾರಿ, ತಹಸೀಲ್ದಾರ್‌ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಕೈಗೊಳ್ಳಲು ನಿರ್ಧರಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ, ‘ಪೌರಕಾರ್ಮಿಕರನ್ನು ಕಾಯಂಗೊಳಿಸಲು ಮುಂದಾಗಿರುವ ಸರ್ಕಾರ, ಕಸ ವಿಲೇವಾರಿ ವಾಹನ ಚಾಲಕರು, ಸಹಾಯಕರು, ನೀರು ಪೂರೈಕೆದಾರರನ್ನು ಕಡೆಗಣಿಸಿದೆ. ಜತೆಗೆ ಲೋಡರ್ಸ್‌, ಕ್ಲೀನರ್ಸ್‌, ಡಾಟಾ ಎಂಟ್ರಿ ಆಪರೇಟರ್ಸ್‌, ಸ್ಯಾನಿಟರಿ ಸೂಪರ್‌ವೈಸರ್‌ಗಳನ್ನು ಕೂಡ ನೇರ ನೇಮಕಾತಿಗೆ ಪರಿಗಣಿಸುತ್ತಿಲ್ಲ. ಸರ್ಕಾರದ ಈ ತಾರತಮ್ಯ ನಡೆಯಿಂದ ರಾಜ್ಯದಲ್ಲಿ 15 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅತಂತ್ರರಾಗಿದ್ದಾರೆ’ ಎಂದು ದೂರಿದರು. ಹಿಸಿ ರಾಜ್ಯದ 330 ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ, ತಾಲೂಕು ಆಡಳಿತ ಕಚೇರಿ ಎದುರು ಧರಣಿ ನಡೆಸಲಿದ್ದೇವೆ ಎಂದರು.

2017ರಲ್ಲಿ ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿದ ವೇಳೆಯೂ ಇದೇ ರೀತಿ ತ್ಯಾಜ್ಯ ವಿಲೇವಾರಿ ಹೊರಗುತ್ತಿಗೆಯವರನ್ನು ಕಾಯಂ ಮಾಡಿರಲಿಲ್ಲ. ಪೌರ ಕಾರ್ಮಿಕರನ್ನು ನೇರ ನೇಮಕಾತಿ ಮಾಡುತ್ತಿರುವುದು ಸ್ವಾಗತಾರ್ಹ. ಆದರೆ, ಪ್ರತಿನಿತ್ಯ ಅವರ ಜತೆಗೆ ದುಡಿಯುವ ನಮ್ಮನ್ನೂ ಈ ಪ್ರಕ್ರಿಯೆಯಡಿ ಕಾಯಂಗೊಳಿಸಬೇಕು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯದ 330 ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಕಾರ್ಮಿಕರು ಜಿಲ್ಲಾಧಿಕಾರಿ, ತಾಲೂಕು ಆಡಳಿತ ಕಚೇರಿ ಎದುರು ಧರಣಿ ನಡೆಸಲಿದ್ದೇವೆ. ಮುಖ್ಯಮಂತ್ರಿಗಳು ಈ ಬಗ್ಗೆ ಸ್ಪಷ್ಟತೀರ್ಮಾನ ಪ್ರಕಟಿಸುವವರೆಗೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು

error: Content is protected !!