ಬೆಂಗಳೂರು: ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವಿನಾಕಾರಣ ಬೆಂಗಳೂರಿನ ಬಗ್ಗೆ ಅಪಪ್ರಚಾರ ಮಾಡುತ್ತಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾನುವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿಯಿಂದ ಅನುಷ್ಠಾನಗೊಳಿಸಲಾಗಿರುವ ವಿವಿಧ ಯೋಜನೆಗಳಿಗೆ ಭಾನುವಾರ ಚಾಲನೆ ನೀಡಿ ಡಾ
ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಂಗಳೂರು ಅಭಿವೃದ್ಧಿಯಾಗುತ್ತಿದೆ. ಆದರೂ ನಗರದ ಹೆಸರು ಹಾಳಾಗುವಂತೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಚೆನ್ನೈ, ಮುಂಬೈ, ದೆಹಲಿ ನಗರಗಳಲ್ಲಿ ಸಣ್ಣ ಮಳೆಯಾದರೂ ಪ್ರವಾಹ ಸೃಷ್ಟಿಯಾಗುತ್ತದೆ. ಇಡೀ ನಗರಗಳೇ ಮುಳುಗುತ್ತವೆ. ಆದರೆ, ಈ ಬಾರಿ ಬೆಂಗಳೂರಿನಲ್ಲಿ ಕಳೆದ 50 ವರ್ಷಗಳಲ್ಲೇ ಹೆಚ್ಚಿನ ಮಳೆಯಾಗಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಆದರೆ, ಇಡೀ ನಗರವೇ ಮುಳುಗಡೆಯಾಗಿದೆ ಎಂದು ಬಿಂಬಿಸಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುವಂತೆ ಮಾಡಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಎಷ್ಟೇ ಅಪಪ್ರಚಾರ ಮಾಡಿದರೂ ಅದನ್ನು ನಾವು ಸಕಾರಾತ್ಮಕವಾಗಿ ತೆಗೆದುಕೊಂಡು ಕೆಲಸ ಮಾಡಿದ್ದೇವೆ. ಸವಾಲು, ಹೀಗಳಿಕೆಯನ್ನು ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿದ್ದೇವೆ. ನಗರೋತ್ಥಾನ ಯೋಜನೆ ಅಡಿಯಲ್ಲಿ 6 ಸಾವಿರ ಕೋಟಿ ರು. ಅನುದಾನ ನೀಡಿ, ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.
ಬೆಂಗಳೂರಿನ ಅಭಿವೃದ್ಧಿ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವವರು ನಮ್ಮ ಜತೆ ಚರ್ಚೆಗೆ ಬರಲಿ. ನಮ್ಮ ಶಾಸಕರು, ಸಚಿವರ ನೇತೃತ್ವದಲ್ಲಿ ನಡೆದ ಅಭಿವೃದ್ಧಿಗಳನ್ನು ಬಂದು ನೋಡಲಿ. ಎಷ್ಟೇ ಅನುದಾನ ನೀಡಿದರೂ ಅದನ್ನು ಸದುಪಯೋಗಪಡಿಸಿಕೊಳ್ಳಬೇಕಾದ ಮನಸ್ಸಿರಬೇಕು. ಆ ಮನಸ್ಸು, ಗುರಿ ನಮ್ಮ ಶಾಸಕರಿಗಿದೆ. ಬೆಂಗಳೂರಿನ ಯೋಜನಾ ಬದ್ಧ ಬೆಳವಣಿಗೆ, ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ವಿಶೇಷ ಯೋಜನೆ ಘೋಷಿಸಿ ಅನುಷ್ಠಾಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಿವಶರಣ ಮಾದಾರ ಚೆನ್ನಯ್ಯ ಮಠದ ಬಸವಮೂರ್ತಿ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಡಾ
ಸಿ.ಎನ್.ಅಶ್ವತ್ಥನಾರಾಯಣ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ರಾಜ್ಯಸಭೆ ಸದಸ್ಯ ಜಗ್ಗೇಶ್, ಶಾಸಕರಾದ ಎಸ್.ಸುರೇಶ್ಕುಮಾರ್, ಜಮೀರ್ ಅಹಮದ್, ಪುಟ್ಟಣ್ಣ, ಅ.ದೇವೇಗೌಡ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇದ್ದರು.
ಕನಸು ನನಸಾಗಿದೆ: ವಿ.ಸೋಮಣ್ಣ
ಸ್ಥಳೀಯ ಶಾಸಕರೂ ಆಗಿರುವ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಮಾತನಾಡಿ, ಗೋವಿಂದರಾಜ ನಗರ ಜನತೆಗೆ ಇಂದು ಹಬ್ಬದ ದಿನವಾಗಿದೆ. ನಾನು ಕಂಡ ಕನಸು ಇಂದು ನನಸಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಹಕಾರದಿಂದ 145 ಕೋಟಿ ರು. ವೆಚ್ಚದಲ್ಲಿ 8 ಕಿ.ಮೀ ಉದ್ದದ ಹೈಟೆನ್ಷನ್ ತಂತಿಯನ್ನು ಭೂಮಿ ಒಳ ಭಾಗದಲ್ಲಿ ಅಳವಡಿಕೆ ಮಾಡಲಾಗಿದೆ. ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ರಾಜ್ಯದ ಮೊದಲನೇ ಅಭಿವೃದ್ಧಿ ಕ್ಷೇತ್ರವಾಗಬೇಕು ಎಂಬುದು ನನ್ನ ಆಸೆ ಆಗಿದೆ ಎಂದರು.
ಫೆ.16ರಂದು ದಾಸರಹಳ್ಳಿಯಲ್ಲಿ ಬಿಬಿಎಂಪಿಯಿಂದ ನಿರ್ಮಿಸಲಾದ 315ಹಾಸಿಗೆ ಸಾಮರ್ಥ್ಯದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಲೋಕಾರ್ಪಣೆ ಮಾಡಲಾಗುವುದು. ಇದರಿಂದ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ. ವಸತಿ ಇಲಾಖೆಯಿಂದ ಜ.31 ರಂದು 5 ಸಾವಿರ ಮನೆಯನ್ನು ಬಡವರಿಗೆ ಹಂಚಿಕೆ ಮಾಡಲಾಗುತ್ತಿದೆ. 52 ಸಾವಿರ ಮನೆ ನಿರ್ಮಾಣ ಮಾಡಲಾಗಿದೆ. 3.50 ಲಕ್ಷ ಕುಟುಂಬಗಳಿಗೆ ಒಟ್ಟು 7,800 ಎಕರೆ ಭೂಮಿಯನ್ನು ನೀಡಿ ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ವಿವರಿಸಿದರು.
ಲೋಕಾರ್ಪಣೆ ಮಾಡಿದ ಕಾಮಗಾರಿಗಳ ವಿವರ
*ಡಾ. ರಾಜಕುಮಾರ್ ವಾರ್ಡ್ನಲ್ಲಿ ₹15 ಕೋಟಿ ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
*ಡಾ. ಬಿ.ಆರ್.ಅಂಬೇಡ್ಕರ್ ಮೈದಾನವನ್ನು ಒಟ್ಟು .₹32 ಕೋಟಿ ವೆಚ್ಚದಲ್ಲಿ ನವೀಕರಣ
*ಪಶ್ಚಿಮ ಕಾರ್ಡ್ ರಸ್ತೆಯ 72ನೇ ಅಡ್ಡ ರಸ್ತೆಯ ಸ್ಥಳದಲ್ಲಿ ₹76.54 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
ಮಾಗಡಿ ರಸ್ತೆ ಪೊಲೀಸ್ ಠಾಣೆ ನೂತನ ಕಟ್ಟಡ