ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಗೆ ಅಗತ್ಯ ಭದ್ರತೆ ಒದಗಿಸಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ದೇಶಾದ್ಯಂತ ಸಾಗುತ್ತಿರುವ ಭಾರತ್ ಜೋಡೋ ಯಾತ್ರೆ ಸದ್ಯ ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿದೆ. ನಿನ್ನೆ ಶುಕ್ರವಾರ ಪೊಲೀಸ್ ಭದ್ರತೆ ವೈಫಲ್ಯದಿಂದಾಗಿ ಕಾಂಗ್ರೆಸ್ ಪಕ್ಷ ಈ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿರುವ ಖರ್ಗೆ, ವೈಯಕ್ತಿಕವಾಗಿ ಮಧ್ಯಪ್ರವೇಶಿಸಿ ಭಾರತ್ ಜೋಡೋ ಯಾತ್ರೆಯ ವೇಳೆ ಸಮರ್ಪಕ ಭದ್ರತೆಯ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಮುಂದಿನ ಎರಡು ದಿನಗಳ ಕಾಲ ಭಾರತ್ ಜೋಡೋ ಯಾತ್ರೆಗೆ ಭಾರೀ ಜನರು ಸೇರುವ ನಿರೀಕ್ಷೆ ಇದೆ. ಶ್ರೀನಗರದಲ್ಲಿ ಜನವರಿ 30ರಂದು ನಡೆಯುವ ಕಾರ್ಯಕ್ರಮಕ್ಕೂ ಭಾರೀ ಜನಸ್ತೋಮ ಇರಲಿದೆ. ಹಿರಿಯ ಕಾಂಗ್ರೆಸ್ಸಿಗರು ಮಾತ್ರವಲ್ಲ ಇತರ ರಾಜಕೀಯ ಪಕ್ಷಗಳ ಪ್ರಮುಖ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ…. ನೀವು ವೈಯಕ್ತಿಕವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ ಯಾತ್ರೆ ಸಮಾಪ್ತಿಯಾಗುವವರೆಗೂ ಮತ್ತು ಜನವರಿ 30ರ ಕಾರ್ಯಕ್ರಮ ಮುಗಿಯುವವರೆಗೂ ಅಗತ್ಯ ಭದ್ರತೆ ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಬೇಕು” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಪತ್ರದಲ್ಲಿ ಕೇಳಿಕೊಂಡಿದ್ದಾರೆ.
ನಿನ್ನೆ ಶುಕ್ರವಾರ ಕಾಶ್ಮೀರ ಕಣಿವೆಯಲ್ಲಿ ಭಾರತ್ ಜೋಡೋ ಪಾದಯಾತ್ರೆ ನಡೆಸುವ ವೇಳೆ ಪೊಲೀಸ್ ಭದ್ರತೆಯಲ್ಲಿ ವ್ಯತ್ಯಯವಾಗಿತ್ತು. ಅದೇ ದಿನ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಉಲ್ಲೇಖಿಸಿ ತಾನು ಯಾತ್ರೆ ಈ ದಿನಕ್ಕೆ ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿದರು.
ಯಾತ್ರೆಯ ವೇಳೆ ಜನರ ಗುಂಪನ್ನು ನಿಯಂತ್ರಿಸಲು ಪೊಲೀಸರೇ ಇರಲಿಲ್ಲ ಎಂಬುದು ರಾಹುಲ್ ಗಾಂಧಿ ಆರೋಪ.
“ಇವತ್ತು ಬೆಳಗ್ಗೆ ಭಾರತ್ ಜೋಡೋ ಯಾತ್ರೆಯಲ್ಲಿ ದುರದೃಷ್ಟಕ್ಕೆ ಪೊಲೀಸ್ ಭದ್ರತಾ ವ್ಯವಸ್ಥೆ ಸಂಪೂರ್ಣ ಕುಸಿದುಹೋಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರೇ ಇರಲಿಲ್ಲ. ನಾನು ಪಾದಯಾತ್ರೆ ಮುಂದುವರಿಸುವುದರಿಂದ ನನ್ನ ಭದ್ರತಾ ಸಿಬ್ಬಂದಿಯ ಆತಂಕಗೊಂಡಿದ್ದರು. ಆದ್ದರಿಂದ ನನ್ನ ನಡಿಗೆಯನ್ನು ನಿಲ್ಲಿಸಬೇಕಾಯಿತು. ಇತರರು ಪಾದಯಾತ್ರೆ ಮುಂದುವರಿಸಿದರು” ಎಂದು ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ತಿಳಿಸಿದರು.
2022 ಸೆಪ್ಟೆಂಬರ್ನಲ್ಲಿ ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭಗೊಂಡ ಭಾರತ್ ಜೋಡೋ ಯಾತ್ರೆ ಕೇರಳ, ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ಹರ್ಯಾಣ, ದೆಹಲಿ, ಉತ್ತರಪ್ರದೇಶ, ಪಂಜಾಬ್, ಹಿಮಾಚಲಪ್ರದೇಶ ರಾಜ್ಯಗಳಲ್ಲಿ ಸಂಚರಿಸಿ ಇದೀಗ ಜಮ್ಮು ಕಾಶ್ಮೀರದಲ್ಲಿದೆ. ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪ ನಡೆಯಲಿದೆ. ರಾಹುಲ್ ಗಾಂಧಿ ಇಡೀ ಯಾತ್ರೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಟ್ಟು 150ಕ್ಕೂ ಹೆಚ್ಚು ದಿನಗಳ ಕಾಲ ನಡೆಯುತ್ತಿರುವ ಮತ್ತು 3,500 ಕಿಮೀಗೂ ಹೆಚ್ಚು ದೂರ ಸಂಚರಿಸಿರುವ ಭಾರತ್ ಜೋಡೋ ಯಾತ್ರೆ ನಾನಾ ಕಾರಣಗಳಿಗೆ ಗಮನ ಸೆಳೆದಿದೆ.