ಬೆಂಗಳೂರು: 2020ರಲ್ಲಿ ಜಾರಿಗೆ ತಂದಿರುವ ತಿದ್ದುಪಡಿ ನಿಯಮಗಳ ಪ್ರಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿ ಶೇ.25ರಷ್ಟು ಸೀಟುಗಳನ್ನು ಕೊಡುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಾಗರಬಾವಿ ಬಳಿಯ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (ಎನ್ಎಲ್ಎಸ್ಐಯು) ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವ ಡಾ ಸಿ.ಎನ್.ಅಶ್ವತ್ಥ ನಾರಾಯಣ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
ವಿಶಾಖಪಟ್ಟಣ, ರಾಯಪುರ, ಕೋಲ್ಕತ್ತ ಮುಂತಾದ ಕಡೆಗಳಲ್ಲಿ ಇರುವ ಇಂತಹುದೇ ಕಾನೂನು ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ರಾಜ್ಯದ ವಿದ್ಯಾರ್ಥಿಗಳಿಗೆ ಅಖಿಲ ಭಾರತೀಯ ಕೋಟಾ ಹೊರತುಪಡಿಸಿಯೇ ಆಯಾ ರಾಜ್ಯಗಳ ಸ್ಥಳೀಯ ವಿದ್ಯಾರ್ಥಿಗಳಿಗೆ ಶೇ.25ರಷ್ಟುಸೀಟುಗಳನ್ನು ಕೊಡಲಾಗುತ್ತಿದೆ. ಇದನ್ನು ಬೆಂಗಳೂರಿನ ಎನ್ಎಲ್ಎಸ್ಐಯು ಕೂಡ ಅನುಸರಿಸುವುದು ಕಡ್ಡಾಯವಾಗಿದೆ. ಆದರೆ, 2022ನೇ ಸಾಲಿನಲ್ಲಿ ವಿವಿಯು ಒಟ್ಟು 180 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದ್ದು, ಇದರಲ್ಲಿ 45 ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಅಡಿ ಕೊಡಬೇಕಿತ್ತು.
ಇದು ಆಗಿಲ್ಲ. ಅಖಿಲ ಭಾರತೀಯ ಮೆರಿಟ್ ಕೋಟಾದಡಿ ಆಯ್ಕೆಯಾಗಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಕೂಡ ‘ಸ್ಥಳೀಯ ಮೀಸಲಾತಿ’ ಅಡಿ ಪರಿಗಣಿಸಿ, ಕೇವಲ 32 ವಿದ್ಯಾರ್ಥಿಗಳಿಗೆ ಸ್ಥಳೀಯ ಮೀಸಲಾತಿ ಸೌಲಭ್ಯದಡಿ ಪ್ರವೇಶ ಕೊಟ್ಟಿರುವುದು ಸರಿಯಲ್ಲ. ಇದರಿಂದ ರಾಜ್ಯದ 13 ವಿದ್ಯಾರ್ಥಿಗಳು ಅವಕಾಶ ಕಳೆದುಕೊಂಡಂತಾಗಿದೆ ಎಂದು ಸಚಿವರು ತಮ್ಮ ಪತ್ರದಲ್ಲಿ ತೀಕ್ಷ್ಣವಾಗಿ ತಿಳಿಸಿದ್ದಾರೆ.
2023ರಲ್ಲಿ ಈ ಸಂಸ್ಥೆಯಲ್ಲಿ ಒಟ್ಟು 240 ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಈ ಪೈಕಿ 60 ಸೀಟುಗಳನ್ನು ಸ್ಥಳೀಯ ಮೀಸಲಾತಿ ಅಡಿ ರಾಜ್ಯದ ವಿದ್ಯಾರ್ಥಿಗಳಿಗೆ ಕೊಡಬೇಕು. ಈಗಾಗಲೇ ತಾತ್ಕಾಲಿಕ ಆಯ್ಕೆ ಪ್ರಕಟಿಸಿದ್ದಲ್ಲಿ ಆಗಿರುವ ಲೋಪವನ್ನು ಸರಿಪಡಿಸಬೇಕು. ಅಕಸ್ಮಾತ್ ಆಗದಿದ್ದರೆ ‘ಸೂಪರ್ -ನ್ಯೂಮರರಿ’ ಮಾನದಂಡವನ್ನು ಪರಿಗಣಿಸಿ, ಆಯ್ಕೆ ಪಟ್ಟಿಯನ್ನು ಪರಿಷ್ಕರಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ.
ಇದಲ್ಲದೆ, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸಂಸ್ಥೆಗೆ ರಾಜ್ಯ ಸರ್ಕಾರವು ಪ್ರಸಕ್ತ ಸಾಲಿನಲ್ಲಿ .22 ಕೋಟಿ ಅನುದಾನ ನೀಡಿದೆ. ಇದನ್ನು ಸಂಸ್ಥೆಯು ಮರೆಯಬಾರದು. ಹಾಗೆಯೇ ಸ್ಥಳೀಯ ಮೀಸಲಾತಿಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳು ಮತ್ತು ವಕೀಲರ ಸಂಘಗಳು ಎತ್ತಿರುವ ದನಿಯನ್ನು ಕೂಡ ಗಮನಿಸಬೇಕು ಎಂದು ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಬಾಲಪುರಸ್ಕಾರ ಪಡೆದ ಬೆಂಗಳೂರು ಬಾಲಕ
‘ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿಗೆ ಭಾಜನವಾಗಿರುವ ಪುತ್ರ ರಿಷಿ ಶಿವಪ್ರಸನ್ನ ಐಕ್ಯೂ(ಬುದ್ಧಿಮತ್ತೆ) ಪ್ರಖ್ಯಾತ ವಿಜ್ಞಾನಿಗಳಾದ ಆಲ್ಬರ್ಚ್ ಐನ್ಸ್ಟೀನ್, ಸ್ಟೀಫನ್ ಹಾಕಿನ್ಸ್ ಅವರಿಗಿಂತ ಅಧಿಕವಾಗಿದೆ’ ಎಂದು ತಂದೆ ಪ್ರೊ.ಪ್ರಸನ್ನ ಕುಮಾರ್ ತಿಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಲು ಪುತ್ರನೊಂದಿಗೆ ದೆಹಲಿಗೆ ತೆರಳಿರುವ ಅವರು ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ರಿಷಿ ಚಿಕ್ಕವನಿದ್ದಾಗಲೇ ಅವನ ‘ಐಕ್ಯೂ ಹೆಚ್ಚಾಗಿದೆ, ಪರೀಕ್ಷೆ ಮಾಡಿಸಿ’ ಎಂದು ಶಿಕ್ಷಕಿ ಸರಿತಾ ಅವರು ತಿಳಿಸಿದ್ದರು. ಆಗ ಪರೀಕ್ಷಿಸಿದಾಗ 180ಕ್ಕೂ ಹೆಚ್ಚು ಐಕ್ಯೂ ಇರುವುದು ಬೆಳಕಿಗೆ ಬಂತು. ಇದು ಪ್ರಖ್ಯಾತ ವಿಜ್ಞಾನಿಗಳಾದ ಆಲ್ಬರ್ಚ್ ಐನ್ಸ್ಟೀನ್, ಸ್ಟೀಫನ್ ಹಾಕಿನ್ಸ್ ಅವರಿಗಿಂತ ಅಧಿಕವಾಗಿದೆ ಎಂದು ತಿಳಿಸಿದರು.
ನಾಗರಬಾವಿಯ ಆರ್ಕಿಡ್ ಸ್ಕೂಲ್ನಲ್ಲಿ ಎಲ್ಕೆಜಿಗೆ ಸೇರ್ಪಡೆಯಾದಾಗಲೇ ರಿಷಿಯ ಪ್ರತಿಭೆಯನ್ನು ಅಲ್ಲಿನ ಶಿಕ್ಷಕಿ ಗುರುತಿಸಿದರು. ಬಳಿಕ ಬನಶಂಕರಿಯ ವಿದ್ಯಾಶಿಲ್ಪ ಶಾಲೆಗೆ ರಿಷಿಯನ್ನು ಸೇರಿಸಿದ್ದು ಇದೀಗ ಮೂರನೇ ತರಗತಿ ಅಭ್ಯಾಸ ಮಾಡುತ್ತಿದ್ದಾನೆ. ಮೂರೂವರೆ ವರ್ಷದವನಿದ್ದಾಗಲೇ ರಿಷಿಯಲ್ಲಿನ ಪ್ರತಿಭೆ ಬೆಳಕಿಗೆ ಬಂದಿತ್ತು. ಇದೀಗ ರಾಷ್ಟ್ರೀಯ ಬಾಲ ಪುರಸ್ಕಾರ ಸಂದಿರುವುದು ಸಂತಸ ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾನು ಕುಂಬಳಗೂಡಿನ ರಾಜರಾಜೇಶ್ವರಿ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ಕಂಪ್ಯೂಟರ್ ಸೈನ್ಸ್ ಪ್ರೊಫೆಸರ್. ನನ್ನ ಪತ್ನಿ ಐಬಿಎಂನಲ್ಲಿ ಬ್ಯುಸಿನೆಸ್ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂಗ್ಲೆಂಡ್ನಲ್ಲಿರುವ ‘ಮೆನ್ಸಾ’ ಸಂಘಟನೆ ಐಕ್ಯೂ ಹೆಚ್ಚಾಗಿರುವವರಿಗೆ ಮಾತ್ರ ಸದಸ್ಯತ್ವ ನೀಡುತ್ತದೆ. 4.11 ವರ್ಷದವನಿದ್ದಾಗಲೇ ರಿಷಿಗೆ ಇದರ ಸದಸ್ಯತ್ವ ಸಿಕ್ಕಿತು ಎಂದರು