ದೆಹಲಿ ಸೇರಿದಂತೆ ವಾಯುವ್ಯ ಭಾರತವು ಕಳೆದ ವಾರದಿಂದ ಶೀತ ಅಲೆಯಿಂದ ತತ್ತರಿಸುತ್ತಿದ್ದು, ತಾಪಮಾನವು 1.8 ಡಿಗ್ರಿ ಸೆಲ್ಸಿಯಸ್ ಗೆ ಇಳಿದಿದೆ. ಮೈ ಕೊರೆಯುವ ಚಳಿಯೊಂದಿಗೆ ಮಂಜು ಮತ್ತು ಮೋಡ ಕವಿದ ವಾತಾವರಣದಿಂದ ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರ ಪ್ರಕರಣಗಳಲ್ಲಿ ಆತಂಕಕಾರಿಯಾಗಿ ಏರಿಕೆಯಾಗಿವೆ ಅಂತ ಹೇಳಬಹುದು. ತಜ್ಞರು ಸೂಚಿಸಿರುವಂತೆ, ದೇಹವನ್ನು ಬೆಚ್ಚಗಿಡಲು ಅನೇಕ ಪದರಗಳ ಬಟ್ಟೆಯನ್ನು ಧರಿಸುವುದು ಮುಖ್ಯ ಎಂದಾಗಿದೆ.
ಅಲ್ಲದೆ, ಕೆಲವು ಮನೆಮದ್ದುಗಳು ನಿಮ್ಮನ್ನು ಬೆಚ್ಚಗಿಡುತ್ತವೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹ ಸಹಾಯ ಮಾಡುತ್ತವೆ ಅಂತ ಹೇಳಬಹುದು. “ನೀವು ಕಾಲೋಚಿತ ಕಾಯಿಲೆಗಳಿಗೆ ಗುರಿಯಾಗುವವರಾಗಿದ್ದರೆ, ಶೀತ ಮತ್ತು ಕೆಮ್ಮು ಕೆಲವು ದಿನಗಳು ಮಾತ್ರವಲ್ಲ, ಇಡೀ ವಾರವನ್ನು ಹಾಳು ಮಾಡುತ್ತದೆ” ಎಂದು ಆಹಾರ (Food) ತಜ್ಞೆ ಪ್ರೀತಿ ಗುಪ್ತಾ ಸುದ್ದಿ ಮಾಧ್ಯಮಕ್ಕೆ ತಿಳಿಸುತ್ತ ಚಳಿಗಾಲದಲ್ಲಿ ಸಾಮಾನ್ಯ ಶೀತ ಮತ್ತು ಕೆಮ್ಮನ್ನು ತಡೆಗಟ್ಟಲು ಸಹಾಯ ಮಾಡುವ 10 ಮನೆಮದ್ದುಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ
ಸಾಕಷ್ಟು ದ್ರವಗಳನ್ನು ಕುಡಿಯಿರಿ. ಚಳಿಗಾಲದಲ್ಲಿ ದ್ರವಗಳನ್ನು ಕುಡಿಯುವುದನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ, ಏಕೆಂದರೆ ಅನೇಕ ಜನರಿಗೆ ಚಳಿಗಾಲದಲ್ಲಿ ಹೆಚ್ಚಾಗಿ ಬಾಯಾರಿಕೆ ಆಗುವುದಿಲ್ಲ. ಇದು ನಿರ್ಜಲೀಕರಣಕ್ಕೆ ಸಹ ಕಾರಣವಾಗುತ್ತದೆ.
ವಿವಿಧ ದ್ರವಗಳನ್ನು, ವಿಶೇಷವಾಗಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹವು ಸಾಕಷ್ಟು ರೋಗಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ, ಏಕೆಂದರೆ ಅದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತದೆ, ಅದನ್ನು ಸ್ವಚ್ಛವಾಗಿರಿಸುತ್ತದೆ. ಬೆಚ್ಚಗಿನ ನೀರನ್ನು ಹೊರತುಪಡಿಸಿ ತಾಜಾ ತರಕಾರಿ ಸೂಪ್ ಗಳನ್ನು ನೀವು ಸೇವಿಸಬಹುದು” ಎಂದು ಪ್ರೀತಿ ಗುಪ್ತಾ ಹೇಳುತ್ತಾರೆ.
* ಶುಂಠಿ ಮತ್ತು ತುಳಸಿ ನೀರು
ಚಳಿಗಾಲದಲ್ಲಿ, ಶುಂಠಿಯಂತಹ ಪದಾರ್ಥಗಳು ರೋಗಗಳನ್ನು ದೂರವಿಡಲು ಉತ್ತಮವಾಗಿವೆ. “ನೀವು ನಿಧಾನಗತಿಯ ಚಯಾಪಚಯ ಮತ್ತು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ, ಶುಂಠಿ ಮತ್ತು ತುಳಸಿ ನೀರು ನಿಮಗೆ ಸಾಕಷ್ಟು ಸಹಾಯ ಮಾಡುತ್ತದೆ. ಏಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ದಿನವಿಡೀ ನಿಮ್ಮನ್ನು ಸಕ್ರಿಯವಾಗಿರಿಸುತ್ತದೆ” ಎಂದು ಪ್ರೀತಿ ಗುಪ್ತಾ ಹೇಳುತ್ತಾರೆ.
* ಗಂಟಲು ಮತ್ತು ಎದೆಯ ಸೋಂಕಿಗೆ ಜೇನುತುಪ್ಪ ಬೆಸ್ಟ್
ಜೇನುತುಪ್ಪವು ಅಡುಗೆಮನೆಯಲ್ಲಿ ವಿವಿಧ ರೋಗಗಳನ್ನು ಗುಣಪಡಿಸಲು ಬಳಸುವ ಅತ್ಯಂತ ಹಳೆಯ ಪದಾರ್ಥಗಳಲ್ಲಿ ಒಂದಾಗಿದೆ. ಇದು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ, ಇದು ನೋಯುತ್ತಿರುವ ಗಂಟಲನ್ನು ಗುಣಪಡಿಸುತ್ತದೆ ಮತ್ತು ಚಳಿಗಾಲದಲ್ಲಿ ಎದೆಯ ಸೋಂಕನ್ನು ಸಹ ಕಡಿಮೆ ಮಾಡುತ್ತದೆ.
* ಅರಿಶಿನ ನೀರು ಅಥವಾ ಹಾಲು
ಶೀತ ಮತ್ತು ಕೆಮ್ಮಿಗೆ ಅತ್ಯುತ್ತಮ ಔಷಧಿ ಎಂದರೆ ಹಾಲು ಅಥವಾ ನೀರಿನಲ್ಲಿ ಕುದಿಸಿದ ಅರಿಶಿನ ಹಾಕಿಕೊಂಡು ಕುಡಿಯುವುದು. ಇದು ಪ್ರತಿಜೀವಕವಾಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಬಹಳಷ್ಟು ರೋಗಗಳನ್ನು ತಡೆಯುತ್ತದೆ ಮತ್ತು ಶೀತ ತಿಂಗಳುಗಳಲ್ಲಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಸಕ್ರಿಯವಾಗಿರಿಸುತ್ತದೆ.
* ಪ್ರೋಬಯಾಟಿಕ್ ಗಳನ್ನು ಸೇವಿಸುವುದು
ಪ್ರೋಬಯಾಟಿಕ್ ಗಳು ಆರೋಗ್ಯಕರ ಕರುಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಶೀತ, ಕೆಮ್ಮಿನಿಂದ ದೂರವಿಡುತ್ತದೆ. ಚಳಿಗಾಲದಲ್ಲಿ ನಿಮ್ಮನ್ನು ಆರೋಗ್ಯಕರವಾಗಿರಿಸುತ್ತದೆ, ಆದ್ದರಿಂದ ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದು ಮುಖ್ಯವಾಗುತ್ತದೆ.
* ರೋಗ ನಿರೋಧಕ ಶಕ್ತಿಗೆ ವಿಟಮಿನ್ ಸಿ ಸೇವಿಸಿ
ವಿಟಮಿನ್ ಸಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ಶೀತ ಮತ್ತು ಕೆಮ್ಮನ್ನು ವೇಗವಾಗಿ ಗುಣಪಡಿಸುತ್ತದೆ. ಈ ಚಳಿಗಾಲವು ರೋಗ ಮುಕ್ತವಾಗಿರಬೇಕು ಅಂತ ಅಂದುಕೊಂಡರೆ ನೀವು ಆಮ್ಲಾ, ಕಿತ್ತಳೆ ಮತ್ತು ಅನಾನಸ್ ನಂತಹ ಹಣ್ಣುಗಳನ್ನು ಸೇವಿಸಿ.
* ಸೋಂಕನ್ನು ಕಡಿಮೆ ಮಾಡಲು ಸತು ಭರಿತ ಆಹಾರಗಳನ್ನು ಸೇವಿಸಿ
ಬೇಳೆಕಾಳುಗಳು, ಧಾನ್ಯಗಳು ಮತ್ತು ಬೀಜಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಮತ್ತು ಸೋಂಕನ್ನು ಕಡಿಮೆ ಮಾಡುತ್ತವೆ. ಚಳಿಗಾಲದಲ್ಲಿ, ದೇಹವು ರೋಗಗಳ ವಿರುದ್ಧ ಹೋರಾಡುತ್ತಿರುವಾಗ, ಸರಿಯಾದ ಕಾರ್ಯ ನಿರ್ವಹಣೆಯನ್ನು ಬೆಂಬಲಿಸಲು ಆರೋಗ್ಯಕರ ಆಹಾರದ ಅಗತ್ಯವಿದೆ.
* ಚಳಿಗಾಲದಲ್ಲಿ ಗ್ರೀನ್ ಟೀ ಮತ್ತು ಸೂಪ್ ಗಳಂತಹ ಬಿಸಿ ಪಾನೀಯಗಳು ಬೆಸ್ಟ್
ಚಳಿಗಾಲದಲ್ಲಿ ಬೆಚ್ಚಗಿನ ಪಾನೀಯಗಳನ್ನು ಸೇವಿಸುವುದು ದೇಹದ ತಾಪಮಾನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಗ್ರೀನ್ ಟೀ ಮತ್ತು ತಾಜಾ ತರಕಾರಿ ಸೂಪ್ ಗಳು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತವೆ ಮತ್ತು ಬಿಳಿ ರಕ್ತ ಕಣಗಳು ಕಾಲೋಚಿತ ವೈರಸ್ ಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತವೆ.
* ಉಸಿರಾಟದ ವ್ಯಾಯಾಮ ಮಾಡಿ
“ಶೀತ ಮತ್ತು ಕೆಮ್ಮನ್ನು ತಡೆಗಟ್ಟುವಲ್ಲಿ ಉಸಿರಾಟದ ವ್ಯಾಯಾಮವು ಸಾಕಷ್ಟು ಸಹಾಯ ಮಾಡುತ್ತದೆ. ವ್ಯಾಯಾಮದ ಸಮಯದಲ್ಲಿ ನೀವು ಬಲವಂತವಾಗಿ ಉಸಿರಾಡಲು ಪ್ರಾರಂಭಿಸಿದಾಗ, ಮೂಗಿನ ಎರಡು ಹೊಳ್ಳೆಗಳು ಬೆಚ್ಚಗಾಗಲು ಪ್ರಾರಂಭಿಸುತ್ತವೆ” ಎಂದು ಪ್ರೀತಿ ಗುಪ್ತಾ ಹೇಳಿದರು.
ಈ ವ್ಯಾಯಾಮವು ನಿಮ್ಮ ಮೂಗಿನ ಮಾರ್ಗಗಳನ್ನು ತೆರೆಯುತ್ತದೆ ಮತ್ತು ತಾತ್ಕಾಲಿಕವಾಗಿ ಮೂಗಿನ ದಟ್ಟಣೆಯನ್ನು ನಿವಾರಿಸುತ್ತದೆ. “ವ್ಯಾಯಾಮವು ಭಾರಿ ಉಸಿರಾಟಕ್ಕೆ ಕಾರಣವಾಗುತ್ತದೆ ಮತ್ತು ನಿಮ್ಮ ದೇಹದಲ್ಲಿ ಉಷ್ಣತೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ, ಆದ್ದರಿಂದ ಕಾಲೋಚಿತ ಶೀತ ಮತ್ತು ಕೆಮ್ಮನ್ನು ತಡೆಯುತ್ತದೆ” ಎಂದು ಪ್ರೀತಿ ಗುಪ್ತಾ ಹೇಳಿದರು.