ಬೆಳಗಾವಿ: ಸಾಧನೆಗೆ ಲಿಂಗಭೇದವಿಲ್ಲ. ಮಹಿಳೆಯರು ಸಂಕಲ್ಪ ಮಾಡಿದಲ್ಲಿ ಸಮಾಜದ ಯಾವುದೇ ಕ್ಷೇತ್ರದಲ್ಲಿ ಸಾಧನೆಗೈಯ್ಯಲು ಸಾಧ್ಯ ಎಂಬುದಕ್ಕೆ ತಾವೂ ಸೇರಿದಂತೆ ಕೋಟಿ ಉದಾಹರಣೆಗಳಿವೆ. ಮಹಿಳೆಯರ ಏಳಿಗೆಗೆ ಎಲ್ಲ ಸಹಾಯ, ಸಹಕಾರ ನೀಡಲು ತಾವು ಬದ್ಧ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಅವರು ಕ್ಷೇತ್ರ ವ್ಯಾಪ್ತಿಯ ಮಂಡೋಳಿ ಗ್ರಾಮದಲ್ಲಿ ನೂತನ ರಣರಾಗಿಣಿ ಮಹಿಳಾ ಮಂಡಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಗ್ರಾಮದ ಮಹಿಳೆಯರು ಸಂಘಟಿತರಾಗಿ ಮಹಿಳಾ ಮಂಡಳ ರಚಿಸಿಕೊಂಡಿರುವುದು ಸಂತೋಷದ ಸಂಗತಿ. ಈ ಮಹಿಳಾ ಮಂಡಳದ ಮೂಲಕ ಸಮಾಜದ ಉನ್ನತಿಗೆ ಪೂರಕವಾದ ರಚನಾತ್ಮಕ ಕಾರ್ಯಚಟುವಟಿಕೆಗಳು ನಡೆಯಲಿ ಎಂದು ಲಕ್ಷ್ಮೀ ಹೆಬ್ಬಾಳಕರ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ದೀಪಾ ದಶರಥ ಸಾಳವಿ, ಶಾಲಿನಿ ಪರುಶರಾಮ ಕಣಬರ್ಕರ್, ಶೋಭಾ ಶಿವಾಜಿ ಪಾಟೀಲ, ಸರಸ್ವತಿ ದತ್ತಾ ಸಾಳವಿ ಹಾಗೂ ಮಹಿಳಾ ಮಂಡಳದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.