ಬೆಳಗಾವಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ರಾಜಕಾರಣ ರಂಗೇರುತ್ತಿದೆ. ಅದರಲ್ಲೂ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಕದನ ತಾರಕಕ್ಕೇರಿದ್ದು ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರದಲ್ಲಿ ಸಾಹುಕಾರ್ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಹೌದು, ಇನ್ನೇನು ಸಾರ್ವತ್ರಿಕ ಚುನಾವಣೆಗೆ ದಿನಗಣನೇ ಆರಂಭವಾಗಿರುವ ಮಧ್ಯಯೇ ಬೆಳಗಾವಿಯಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. 2018 ರಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಗೆಲ್ಲಿಸಿಕೊಂಡು ಬರುವುದಾಗಿ ಪಣತೊಟ್ಟಿದ್ದ ಗೋಕಾಕ ಸಾಹುಕಾರ್ ರಮೇಶ ಜಾರಕಿಹೊಳಿ ಇಂದು ಬದಲಾದ ಸನ್ನಿವೇಶದಲ್ಲಿ ಅದೇ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಸೋಲಿಸುವುದಾಗಿ ಪಣ ತೊಟ್ಟಿದ್ದಾರೆ. ಕಳೆದ 2 ತಿಂಗಳಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಫುಲ್ ಆಕ್ಟಿವ್ ಆಗಿರುವ ರಮೇಶ ಜಾರಕಿಹೊಳಿ ನಿನ್ನೆ ಗ್ರಾಮೀಣ ಕ್ಷೇತ್ರದ ಪ್ರಮುಖ ಗ್ರಾಮ ಸುಳೇಭಾವಿಯಲ್ಲಿ ಬೆಂಬಲಿಗರ ಬೃಹತ್ ಸಮಾವೇಶ ನಡೆಸಿದ್ದಾರೆ. ಆ ಮೂಲಕ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಸಮರ ಸಾರಿರುವ ಸಾಹುಕಾರ್, ಸಮಾವೇಶದಲ್ಲಿ ಲಕ್ಷ್ಮೀ ಹೆಬ್ಬಾಳಕರ್ ವಿರುದ್ದ ವಾಗ್ದಾಳಿ ನಡೆಸಿದ್ದಲ್ಲದೇ ಲಕ್ಷ್ಮೀ ಹೆಬ್ಬಾಳಕರ್ ಅವರನ್ನ ಸೋಲಿಸುವ ಸಂಕಲ್ಪ ತೊಟ್ಟಿದ್ದಾರೆ.
ಇನ್ನೂ ಲಕ್ಷ್ಮೀ ಹೆಬ್ಬಾಳಕರ್ ಗಿಫ್ಟ್ ಪಾಲಿಟಿಕ್ಸ್ ಬಗ್ಗೆ ವ್ಯಂಗ್ಯವಾಡಿರುವ ರಮೇಶ ಜಾರಕಿಹೊಳಿ, ಚುನಾವಣೆ ಮುಗಿಯೋತನಕ ಟಿಫನ್ ಬಾಕ್ಸ್, ಮಿಕ್ಸರ್ ಇನ್ನೂ ಏನೋ ಕೊಡ್ತಾರೆ ಅದನ್ನೆಲ್ಲ ಸೇರಿ 3 ಸಾವಿರದವರೆಗೆ ಗಿಫ್ಟ್ ಕೊಡಬಹುದು, ನಾವು 6 ಸಾವಿರ ಕೊಟ್ಟರೆ ಮಾತ್ರ ನಮಗೆ ವೋಟ್ ಹಾಕಿ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದೇ ವೇಳೆ ಹೆಬ್ಬಾಳಕರ್ ವಿರುದ್ದ ಗುಡುಗಿದ ಅವರು ಅದೊಂದು ಕೆಟ್ಟ ಹುಳ, ಅದನ್ನು ಹೇಗಾದರು ಮಾಡಿ ತೆಗೆಯಬೇಕು, ಅವರು ಚುನಾವಣೆಗೆ ಎಷ್ಟು ಖರ್ಚು ಮಾಡ್ತಾರೋ ಅದಕ್ಕಿಂತ 10 ಕೋಟಿ ಹೆಚ್ಚು ಖರ್ಚು ಮಾಡ್ತೀವಿ ಎಂದಿದ್ದಾರೆ. ಇನ್ನೂ ಸಮಾವೇಶದ ಬಳಿಕ ಸಮಾವೇಶಕ್ಕೆ ಬಂದಿದ್ದ ವಾಹನ ಚಾಲಕನ ಕೈಯಲ್ಲಿ ಹಣ ನೀಡಿ ಕಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು, ಸಮಾವೇಶಕ್ಕೆ ದುಡ್ಡು ಕೊಟ್ಟು ಜನ ಸೇರಿಸಿದ್ರಾ ಎಂಬ ಅನುಮಾನ ಮೂಡುತ್ತಿದೆ.
ಒಟ್ಟಿನಲ್ಲಿ ರಮೇಶ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳಕರ್ ನಡುವಿನ ಸಮರ ಮುಂದಿನ ದಿನಗಳಲ್ಲಿ ತಾರಕಕ್ಕೇರುವ ಲಕ್ಷಣಗಳಿದ್ದು ಮತದಾರರ ಚಿತ್ತ ಯಾರತ್ತ ಎಂಬುದಕ್ಕೆ ಕಾಯಲೇಬೇಕಿದೆ.