ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿದ್ದು ಎಚ್.ಡಿ.ಕುಮಾರಸ್ವಾಮಿ ಅಲ್ಲ ನಾನು ಎಂದು ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದ್ದಾರೆ. ನಾಗಮಂಗಲ ವಿಧಾನಸಭಾ ಕ್ಷೇತ್ರದ ಮರಳಿಗ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಅವರು, ‘ಮಂಡ್ಯದ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಕಟ್ಟಿದ್ದು ಎಚ್.ಡಿ.ಕುಮಾರಸ್ವಾಮಿ ಅಲ್ಲ.
ಈ ಚಲುವರಾಯಸ್ವಾಮಿಯನ್ನು ಬೆಳೆಸಿದ್ದು ಎಚ್.ಡಿ.ದೇವೇಗೌಡರು ಅಲ್ಲ. ಬಹಳಷ್ಟು ಜನರು ತಪ್ಪು ತಿಳಿದುಕೊಂಡಿದ್ದಾರೆ. ಚಲುವರಾಯಸ್ವಾಮಿ ಜೆಡಿಎಸ್ಗೆ ಮೋಸ ಮಾಡಿಲ್ಲ. ಅಂದು ಜಿಲ್ಲೆಯಲ್ಲಿ JDS ಪಕ್ಷವನ್ನು ಕಟ್ಟಿದ ಬೆಳೆಸಿದ್ದು ನಾನು’ ಎಂದು ಹೇಳಿದ್ದಾರೆ. ಮತ್ತವರ ಕುಟುಂಬದ ವಿರುದ್ಧ ಕಿಡಿಕಾರಿರುವ ಚಲುವರಾಯಸ್ವಾಮಿ, ‘ಕುಮಾರಸ್ವಾಮಿ ಸುಳ್ಳು ಭರವಸೆ ಕೊಡ್ತಾರೆ ನಂಬಬೇಡಿ. ಅವತ್ತು ಜಿ.ಮಾದೇಗೌಡರ ಮಾತು ಕೇಳಿ ಕಾಂಗ್ರೆಸ್ಗೆ ಹೋಗಿದ್ದರೆ ಇಂದು ನನ್ನ ನಾಯಕತ್ವ ಎಲ್ಲೋ ಇರ್ತಿತ್ತು. ಚಲುವರಾಯಸ್ವಾಮಿ ಗೆಲ್ಲಿಸಲು ಮಾದೇಗೌಡರು ಓಡಾಡಿದ್ದರು. ಅವತ್ತು ಅವರ ತಂದೆ ಓಡಾಡಿದ್ರು.
ಇನ್ನು ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಸ್ವಸಹಾಯ ಸಂಘದ ಸಾಲ ಮನ್ನಾ ಮಾಡ್ತಿನಿ ಅಂದರು. ಎಲ್ಲರೂ ಕುಮಾರಸ್ವಾಮಿ ನಂಬಿ ಓಟ್ ಹಾಕಿದರು. ಬಹುಮತ ಬರಲಿಲ್ಲ ಅಂತಾ ಹೇಳಿ ಸಿಎಂ ಆದ ಎಚ್ಡಿಕೆ ಹೇಳಿದ್ದನ್ನು ಮಾಡಲಿಲ್ಲ. ಅವರ ಕುಟುಂಬಕ್ಕೆ ಏನು ಬೇಕೋ ಅದನ್ನು ಮಾಡ್ಕೊಂಡ್ರು. ಜನರಿಗೆ ಕೊಟ್ಟ ಮಾತಿನಂತೆ ಏನು ಮಾಡಿಲ್ಲ.ಇವಾಗ ‘ಪಂಚರತ್ನ ಯಾತ್ರೆ’ ಮೂಲಕ ಮಂಡ್ಯಕ್ಕೆ ಬಂದಿದ್ದಾರೆ. ನಾನು ಅವಾಗ ಹೇಳಿದ್ದು ಸುಳ್ಳು, ಇವಾಗ ಸತ್ಯ ಹೇಳ್ತಿದ್ದಿನಿ ಓಟ್ ಕೊಡಿ ಅಂತಾ’ ಎಂದು ಹೇಳಿದರು.
ಮಹಿಳೆಯರಿಗೆ ಕಾರ್ಯಕ್ರಮ ಕೊಡ್ತಿನಿ ಅಂತಾರೆ. ಅಧಿಕಾರದಲ್ಲಿದ್ದಾಗ ಯಾವ ಕಾರ್ಯಕ್ರಮವನ್ನೂ ಕೊಟ್ಟಿಲ್ಲ. ಈ ಭರವಸೆ ಮೇಲೆ ನಂಬಿಕೆ ಇಡಬೇಡಿ ಎಂದು ಇದೇ ವೇಳೆ ಮಾಜಿ ಸಿಎಂ ಎಚ್ಡಿಕೆ ವಿರುದ್ದ ಚೆಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಯೊಬ್ಬರ ಬದುಕಿಗಾಗಿ ಚಿಂತನೆ ನಡೆಸುತ್ತಿದೆ. ಕಳೆದ ಬಾರಿಯ ಫಲಿತಾಂಶದಲ್ಲಿ ಪಕ್ಷಕ್ಕೆ ಸ್ಪಲ್ಪ ವ್ಯತ್ಯಾಸ ಆಗಿದೆ. ಹಿಂದೆ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡೋಣ. ಎಲ್ಲರನ್ನೂ ಗೌರವಸಿ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಎಲ್ಲರೂ ಸಹ ಈ ಬಾರಿ ಕಾಂಗ್ರೆಸ್ಗೆ ಓಟ್ ಮಾಡಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿಕೊಂಡರು.