ಬೆಂಗಳೂರು: ಪ್ರಿಯಕರನ ಜೊತೆಗೂಡಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಪತಿಯನ್ನೇ ಪತ್ನಿಯೊಬ್ಬಳು ಕೊಲೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 6 ತಿಂಗಳ ಬಳಿಕ ಈ ಮರ್ಡರ್ ಮಿಸ್ಟರಿ ಬಯಲಾಗಿದೆ.
ಕುಡಿದು ಬಂದು ಮಲಗಿದ್ದ ಪತಿಯ ಮುಖದ ಮೇಲೆ ದಿಂಬಿಟ್ಟು ಇಬ್ಬರು ಉಸಿರುಗಟ್ಟಿಸಿ ಕೊಲೆಮಾಡಿದ್ದರು. ತಮ್ಮ ತಂದೆಯ ಕೊಲೆಯನ್ನು ಮಕ್ಕಳು ಕಣ್ಣಾರೆ ಕಂಡಿದ್ದರು. ಮಕ್ಕಳಿಗೆ ತಂದೆ ಸರಿಯಿಲ್ಲ, ಯಾರಿಗೂ ಹೇಳ್ಬೇಡಿ ಅಂತಾ ಹೇಳಿದ್ದ ತಾಯಿ ಅನಿತಾ, ತನ್ನ ಗಂಡನಿಗೆ ಹಾರ್ಟ್ ಅಟ್ಯಾಕ್ ಆಗಿದೆ ಅಂತಾ ಸಂಬಂಧಿಕರಿಗೆ ಕಥೆ ಕಟ್ಟಿದ್ದಳು.
ನಂದಿನಿ ಲೇಔಟ್‍ನ ಸಂಜಯ್ ಗಾಂಧಿನಗರದ ಸ್ಲಂನಲ್ಲಿ ಈ ಘಟನೆ ನಡೆದಿತ್ತು. ಅನಿತಾಳ ಮರಳು ಮಾತುಗಳನ್ನು ನಂಬಿ ಕುಟುಂಬಸ್ಥರು ಕೊಲೆಯಾಗಿದ್ದ ಆಂಜನೇಯನ ಅಂತ್ಯಕ್ರಿಯೆ ಮಾಡಿದ್ದರು. ಆದರೆ ಇತ್ತೀಚೆಗೆ ಮಕ್ಕಳನ್ನು ಬಿಟ್ಟು ಪ್ರಿಯಕರನ ಜೊತೆ ಅನಿತಾ ಎಸ್ಕೇಪ್ ಆಗಿದ್ದಳು.
ಈ ವೇಳೆ ಅಜ್ಜಿಯ ಬಳಿ ತಾಯಿ ಅನಿತಾಳ ಕ್ರೂರತೆ ಬಗ್ಗೆ ಮಕ್ಕಳು ಬಾಯಿಬಿಟ್ಟದ್ದಾರೆ. ಕೂಡಲೇ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ಕೊಲೆಯಾದ ಆಂಜನೇಯನ ತಾಯಿ ದೂರು ನೀಡಿದ್ದರು. ಮಕ್ಕಳು ಹೇಳಿದ ಕೊಲೆ ಸತ್ಯವನ್ನು ದೂರಿನಲ್ಲಿ ಪೊಲೀಸರಿಗೆ ತಿಳಿಸಲಾಗಿತ್ತು. ಈ ಹಿನ್ನೆಲೆ ಪ್ರಿಯತಮೆ ಅನಿತಾ ಮತ್ತು ಪ್ರಿಯಕರ ರಾಕೇಶ್‍ನಲ್ಲಿ ಖಾಕಿಪಡೆ ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದೆ