ಕೂಗು ನಿಮ್ಮದು ಧ್ವನಿ ನಮ್ಮದು

ನವಭಾರತಕ್ಕೆ ವಾಜಪೇಯಿ ಮುನ್ನುಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಜೈ ಜವಾನ್‌, ಜೈ ಕಿಸಾಸ್‌ ಜೊತೆಗೆ ಜೈ ವಿಜ್ಞಾನ ಎಂಬ ಧ್ಯೇಯವಾಕ್ಯವನ್ನು ದೇಶಕ್ಕೆ ನೀಡಿದ ಅಟಲ್‌ ಬಿಹಾರಿ ವಾಜಪೇಯಿ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯ ಕ್ರಾಂತಿ ಮಾಡಿ ನವ ಭಾರತ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಬನಶಂಕರಿಯಲ್ಲಿ ಭಾನುವಾರ ಮಾಜಿ ಪ್ರಧಾನ ಮಂತ್ರಿಗಳಾದ ಅಟಲ್‌ ಬಿಹಾರಿ ವಾಜಪೇಯಿ ಅವರ ಕಂಚಿನ ಪ್ರತಿಮೆ ಹಾಗೂ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಿದ ಬಳಿಕ ಮಾತನಾಡಿದ ಅವರು, ಹಿಂದಿನ ಪ್ರಧಾನಮಂತ್ರಿ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಅವರು ಜೈ ಜವಾನ್‌, ಜೈ ಕಿಸಾನ್‌ ಎಂದು ಕರೆ ಕೊಟ್ಟಿದ್ದರು. ನವ ಭಾರತ ನಿರ್ಮಾಣದ ಕಲ್ಪನೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಜೊತೆಗೆ ಜೈ ವಿಜ್ಞಾನ ಎಂದು ಕರೆ ಕೊಟ್ಟಿದ್ದರು. ವಿಜ್ಞಾನದ ಮಹತ್ವವನ್ನು ಅರಿತ ಅವರು ದೇಶದ ಐಟಿ ಬಿಟಿ ಕ್ಷೇತ್ರದ ಬೆಳವಣಿಗೆಗಾಗಿ ಕೇಂದ್ರ ಸರ್ಕಾರದ ಐಟಿ ಪಾಲಿಸಿಗಳನ್ನು ಜಾರಿಗೆ ತಂದು ದೊಡ್ಡ ಕ್ರಾಂತಿ ಮಾಡಿದ್ದಾರೆ. ಇಂದು ಬೆಂಗಳೂರು ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಕ್ಕೆ ಅವರ ಕಾಲದಲ್ಲಿ ಸಾಫ್ಟವೇರ್‌ ಪಾರ್ಕ್ ನಿರ್ಮಾಣ ಆಗಿದ್ದು ಪ್ರಮುಖ ಕಾರಣ ಎಂದರು.

ಮೌಲ್ಯಾಧರಿತ ರಾಜಕಾರಣಕ್ಕೆ ಒತ್ತು ನೀಡಿದ್ದ ವಾಜಪೇಯಿ: ಪ್ರಲ್ಹಾದ್ ಜೋಶಿ

ವಾಜಪೇಯಿ ಅವರ ಕಾಲದಲ್ಲಿ ಹತ್ತು ಹಲವಾರು ಅಭಿವೃದ್ಧಿ ಕಾರ್ಯಗಳು ಆಗಿದ್ದು, ನವ ಭಾರತ ನಿರ್ಮಾಣಕ್ಕೆ ನಾಂದಿಯಾಗಿದೆ. ಸರ್ವ ಶಿಕ್ಷಣ ಅಭಿಯಾನದ ಮೂಲಕ ಶಿಕ್ಷಣದ ಕ್ರಾಂತಿಯನ್ನು ಮಾಡಿದ್ದಾರೆ. ಅವರ ದಾರಿಯಲ್ಲಿ ನಮ್ಮ ರಾಜ್ಯ ಸರ್ಕಾರ ನಡೆಯುತ್ತಿದೆ. ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ವಿವೇಕ ಕಾರ್ಯಕ್ರಮದ ಮೂಲಕ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿದ್ದು, ಆದರ್ಶವಾದ ಶಾಲೆಗಳ ಕಟ್ಟುವುದಕ್ಕೆ ಅಟಲ ಬಿಹಾರಿ ವಾಜಪೇಯಿ ಅವರು ಪ್ರೇರಣೆ ಆಗಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್‌.ಅಶೋಕ್‌, ಲೋಕಸಭಾ ಸದಸ್ಯರಾದ ಪಿ.ಸಿ ಮೋಹನ್‌, ತೇಜಸ್ವಿ ಸೂರ್ಯ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ ಸಿಂಗ್‌, ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌, ವಲಯ ಆಯುಕ್ತರಾದ ಜಯರಾಮ ರಾಯಪುರ ಉಪಸ್ಥಿತರಿದ್ದರು.

ಅಟಲ್‌ಗೆ ಸಂಗೀತ, ಅಡುಗೆ ಬಗ್ಗೆ ಕಾಳಜಿ: ಮುನಿರಾಜು

ಪೀಣ್ಯ ದಾಸರಹಳ್ಳಿ: ವಾಜಪೇಯಿ ಅವರು ಓರ್ವ ಪತ್ರಕರ್ತರಾಗಿ ವೃತ್ತಿ ಆರಂಭಿಸಿದರು. 1951ರಲ್ಲಿ ಪತ್ರಿಕೋದ್ಯಮ ಬಿಟ್ಟು ಭಾರತೀಯ ಜನ ಸಂಘ ಸೇರಿದವರು. ಅವರೊಳಗೊಬ್ಬ ಕವಿ ಇದ್ದಾನೆ. ನಿರಂತರ ರಾಜಕೀಯ ಚಟುವಟಿಕೆಗಳ ನಡುವೆಯೂ ಅವರು ಸಂಗೀತ ಮತ್ತು ಅಡುಗೆ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು ಎಂದು ಮಾಜಿ ಶಾಸಕ ಎಸ್‌.ಮುನಿರಾಜು ಅಭಿಪ್ರಾಯಪಟ್ಟರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಚೇರಿಯಲ್ಲಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಮಂಡಲ ಅಧ್ಯಕ್ಷ ಎನ್‌.ಲೋಕೇಶ್‌ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಕಣ್ಣು ತಪಾಸಣೆ, ರಕ್ತದ ಒತ್ತಡ, ಸಕ್ಕರೆ ಕಾಯಿಲೆ, ಹೃದಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ದಾಸರಹಳ್ಳಿ ಮಂಡಲ ಅಧ್ಯಕ್ಷ ಎನ್‌.ಲೊಕೇಶ್‌ ಮಾತನಾಡಿ, ಭಾರತದ ಪ್ರಮುಖ ನಗರಗಳ ನಡುವೆ ಸಂಪರ್ಕ ಕಲ್ಪಿಸುವ ಸುವರ್ಣ ಚತುಷ್ಫಥ ರಸ್ತೆ ನಿರ್ಮಾಣ ಯೋಜನೆ ವಾಜಪೇಯಿ ಅವರ ಪರಿಕಲ್ಪನೆಯಾಗಿತ್ತು. ಅದರಂತೆ ಅವರು ಅದನ್ನು ಜಾರಿಗೆ ತಂದರು. ಭಾರತ-ಪಾಕಿಸ್ತಾನ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆದರು ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ನಾರಾಯಣ, ಬಿಜೆಪಿ ಮಖಂಡರಾದ ಟಿ.ಎಸ್‌.ಗಂಗರಾಜು, ಪಿ.ಎಚ್‌.ರಾಜು, ತಿಮ್ಮೆಗೌಡ ಇದ್ದರು.

error: Content is protected !!